

ಶಿವಮೊಗ್ಗ: ನಿರ್ಮಲ ತುಂಗಾ ಅಭಿಯಾನ ರಾಜಕೀಯ ರಹಿತವಾದದ್ದು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ನದಿಯ ಸಂರಕ್ಷಣೆ ಕೇವಲ ಸರ್ಕಾರದ ಕರ್ತವ್ಯವಲ್ಲ. ಅದರಲ್ಲಿ ಸಾರ್ವಜನಿಕರ ಪಾತ್ರವೂ ಇದೆ ಎಂಬುದನ್ನು ಸಾರುವ ಅಭಿಯಾನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶೃಂಗೇರಿಯಿಂದ ಹಮ್ಮಿಕೊಂಡಿರುವ ನಿರ್ಮಲ ತುಂಗಾ ಅಭಿಯಾನದ ಪೂರ್ವಭಾವಿಯಾಗಿ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ನಾವೆಲ್ಲರೂ ತುಂಗಾ ನದಿಯ ನೀರು ಕುಡಿದು ದೊಡ್ಡವರಾಗಿದ್ದೇವೆ. ಈ ನದಿಯ ಸಂರಕ್ಷಣೆ ನಮ್ಮ ಕರ್ತವ್ಯ ಎಂದರು.
ತುಂಗೆ, ಭದ್ರೆಯಷ್ಟೇ ಅಲ್ಲ ಇಡೀ ರಾಜ್ಯದ ಎಲ್ಲ ನದಿಗಳ ಶುದ್ಧೀಕರಣಕ್ಕೆ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ. ಶಿವಮೊಗ್ಗದ ಅನೇಕ ಪರಿಸರ ಪ್ರೇಮಿಗಳು ಒಗ್ಗಟ್ಟಾಗಿ ಒಂದು ಸಮಿತಿಯನ್ನು ರಚಿಸಿ ಈಗಾಗಲೇ ಹಲವು ಹೆಜ್ಜೆಗಳನ್ನು ಇರಿಸಿರುವುದು ಉತ್ತಮ ಸಂಗತಿ. ನದಿ ಕಲುಷಿತಗೊಳ್ಳಲು ನಾವೇ ಕಾರಣ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಗಂಡಾಂತರ ಕಾದಿದೆ. ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ಯಶಸ್ಸಿಗೆ ಈಗಾಗಲೇ ಅನೇಕ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲಾಗಿದೆ. ಪ್ರಮುಖವಾಗಿ ಯುವಕರು, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಇದರಲ್ಲಿ ಕೈಜೋಡಿಸಲಿವೆ. ಅಧಿಕಾರಿಗಳನ್ನು ಇದರಲ್ಲಿ ಸೇರಿಸಿಕೊಳ್ಳಲಾಗುವುದು ಎಂದರು.
ಅಭಿಯಾನದ ಪ್ರಮುಖರಾದ ಡಾ. ಶ್ರೀಪತಿ ಮಾತನಾಡಿ, ತುಂಗೆಯ ನೀರು ಸ್ನಾನಕ್ಕೂ ಯೋಗ್ಯವಲ್ಲದ ಪರಿಸ್ಥಿತಿ ಬಂದಿದೆ. ಇದಕ್ಕೆ ಹಲವು ಕಾರಣಗಳಿವೆ. ಕೃಷಿ ಜಮೀನಿಗೆ ಬಳಕೆ ಮಾಡುವ ರಾಸಾಯನಿಕಗಳು ಹೇರಳ ಪ್ರಮಾಣದಲ್ಲಿ ನದಿಗೆ ಸೇರುತ್ತಿದೆ. ತುಂಗೆಯ ಮೂಲ ಶೃಂಗೇರಿಯಿಂದಲೇ ಶುದ್ಧೀಕರಣದ ಕೆಲಸವಾಗಬೇಕಿದೆ ಎಂದು ಹೇಳಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಪ್ರಮುಖರಾದ ಗಿರೀಶ್ ಪಟೇಲ್, ಎಂ.ಶಂಕರ್, ಕಲಗೋಡು ರತ್ನಾಕರ್, ಚಂದ್ರಭೂಪಾಲ, ಎಸ್.ಬಿ.ಅಶೋಕ್‌ಕುಮಾರ್, ಬಾಲು ನಾಯ್ಡು ಮುಂತಾದವರಿದ್ದರು.