ಜೆಡಿಎಸ್ ಸಂಘಟನೆಗೆ ಸಮಿತಿ; ನಾಯಕರ ಪ್ರವಾಸ

jds
Published on

ಬೆಂಗಳೂರು: ಪಕ್ಷ ಸಂಘಟನೆಗಾಗಿ ಸಮಿತಿಯೊಂದನ್ನು ರಚನೆ ಮಾಡಿ, ಎಲ್ಲ ಹಂತದಲ್ಲೂ ಪಕ್ಷಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆ.ಪಿ.ಭವನದಲ್ಲಿ ಮುಂಬರುವ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಪದಾಧಿಕಾರಿಗಳ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ಮಹತ್ವದ ವಿಷಯಗಳ ಬಗ್ಗೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ನಾಯಕರ ಜತೆ ಸಮಾಲೋಚನೆ ನಡೆಸಿದ ವೇಳೆ ಅವರು ಮಾತನಾಡಿದರು.

ಸಮಿತಿ ರಚನೆಯಾದ ಮೇಲೆ ಇನ್ನು ಹತ್ತು ದಿನಗಳ ನಂತರ ಆ ಸಮಿತಿಯಲ್ಲಿ ಇರುವವರು ಎಲ್ಲ ಮುಖಂಡರ ಜತೆಗೂಡಿ 31 ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಹಾಕಿಕೊಳ್ಳಬೇಕು. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಬೇಕು, ಕಾರ್ಯಕರ್ತರ ಪಡೆ ಕಟ್ಟಬೇಕು ಎಂದು ನಿರ್ದೇಶನ ನೀಡಿದರು. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲ ಹಿರಿಯ ಕಿರಿಯ ನಾಯಕರೂ ರಾಜ್ಯ ಪ್ರವಾಸ ಮಾಡಬೇಕು ಎಂದು ಸೂಚನೆ ನೀಡಿದರು.

ಪಕ್ಷ ಸಂಘಟನೆ ನಿರ್ಲಕ್ಷ್ಯ ಸಹಿಸಲ್ಲ

ಪಕ್ಷ ಸಂಘಟನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಹಿಸುವ ಪ್ರಶ್ನೆ ಇಲ್ಲ. ಚುನಾವಣೆ ಬಂದಾಗ ಕಾರ್ಯಕರ್ತರ ಕೈಕಾಲು ಹಿಡಿಯುತ್ತೇವೆ. ಆಮೇಲೆ ಮತ್ತೊಂದು ಚುನಾವಣೆ ಬರುವ ತನಕ ಸಂಘಟನಾ ಕೆಲಸ ಅಲಕ್ಷ್ಯ ಮಾಡುತ್ತೇವೆ. ಇಂಥ ಪ್ರವೃತ್ತಿ ಪಕ್ಷದಲ್ಲಿ ಬದಲಾಗಬೇಕು ಎಂದು ತಾಕೀತು ಮಾಡಿದರು.

ಸದಸ್ಯತ್ವ ನೋಂದಣಿ ಅಭಿಯಾನದ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ, ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಪಕ್ಷ ಉಳಿದಿದೆ. ಹೊಸ ಹೊಸ ರಕ್ತ ಪಕ್ಷಕ್ಕೆ ಹರಿದು ಬರಬೇಕಿದೆ. ಅದಕ್ಕೆ ಪೂರಕವಾದ ವೇದಿಕೆಯನ್ನು ನಾವು ಕಲ್ಪಿಸಬೇಕಿದೆ ಎಂದು ಹೇಳಿದರು.

ಮುಲಾಜಿಲ್ಲದೇ ಪದಾಧಿಕಾರಿ ಬದಲಾವಣೆ

ಪಕ್ಷದ ಕೆಲಸ ಮಾಡದೇ ವರ್ಷಾನುಗಟ್ಟಲೆ ಪದಾಧಿಕಾರಿಯಾಗಿ ಉಳಿಯಬೇಕು ಎಂದು ಭಾವಿಸಿದರೆ ಹೇಗೆ? ಹಾಗೆ ಭಾವಿಸುವ ಅಗತ್ಯ ಇಲ್ಲ. ಕ್ರಿಯಾಶೀಲರಿಗೆ ಅವಕಾಶ ಕೊಡಬೇಕು. ಸಂಘಟನಾ ಶಕ್ತಿಗೆ ಚಾಲನೆ ಕೊಡಬೇಕು. ಪಕ್ಷದ ಕೆಲಸ ಸಮರ್ಪಕವಾಗಿ ಮಾಡದಿದ್ದರೆ ಅಂಥ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.

ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಸಂಸದ ಮಲ್ಲೇಶ್ ಬಾಬು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು, ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net