

ನವದೆಹಲಿ: ಜಮ್ಮು ವಲಯದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಹಾವಳಿ ಜಾಸ್ತಿಯಾಗಿ ಉಗ್ರರಿಂದ ದಾಳಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪಡೆಗಳನ್ನು ಸೇನೆ ನಿಯೋಜಿಸುತ್ತಿದೆ. ಜಮ್ಮುನಲ್ಲಿ ನುಸುಳಿರುವ 50ರಿಂದ 55 ಭಯೋತ್ಪಾದಕರನ್ನು ಬೇಟೆಯಾಡಲು ಭೂಸೇನೆ ವಿಶೇಷ ಪಡೆಗಳ ಸುಮಾರು 500 ಕಮಾಂಡೋಗಳನ್ನು ಅಲ್ಲಿಗೆ ರವಾನಿಸಿದೆ ಎಂದು ರಕ್ಷಣಾ ಪಡೆ ಮೂಲಗಳು ತಿಳಿಸಿವೆ. ಗುಪ್ತಚರ ದಳಗಳು ಕೂಡ ತಮ್ಮ ಮೂಲಸೌಕರ್ಯಗಳನ್ನು ವೃದ್ಧಿಸಿಕೊಂಡು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕಾರ್ಯಕರ್ತರ ಸಹಿತ ಉಗ್ರರ ಜಾಲವನ್ನು ಪತ್ತೆ ಹಚ್ಚಲು ಶ್ರಮಿಸುತ್ತಿವೆ. ಉಗ್ರರ ದಾಳಿಯನ್ನು ಎದುರಿಸುವ ಉದ್ದೇಶದಿಂದ 3,500ರಿಂದ 4,000 ಸಿಬ್ಬಂದಿ ವರೆಗಿನ ಬಲದ ಒಂದು ಬ್ರಿಗೇಡ್ ಸಹಿತ ಹೆಚ್ಚುವರಿ ಪಡೆಗಳನ್ನು ಸೇನೆ ಈಗಾಗಲೇ ನಿಯೋಜಿಸಿದೆ. ಆಧುನಿಕ ಶಸ್ತ್ರಾಸ್ತ್ರ ಮತ್ತು ಸಂವಹನ ಸಾಧನಗಳಿಂದ ಸಜ್ಜಿತರಾಗಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚಿ ನಾಶಪಡಿಸಲು ಸೇನೆಯ ಉನ್ನತ ಅಧಿಕಾರಿಗಳು ಈಗಾಗಲೇ ಕಾರ್ಯತಂತ್ರ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.
9 ಯೋಧರ ಸಾವು: ಕಥುವಾ ಜಿಲ್ಲೆಯ ಮಚೇಡಿ ಮತ್ತು ದೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶಗಳಲ್ಲಿ ಅನುಕ್ರಮವಾಗಿ ಜುಲೈ 8 ಮತ್ತು 15ರಂದು ನಡೆದ ಉಗ್ರರ ಪ್ರತ್ಯೇಕ ದಾಳಿಗಳಲ್ಲಿ ಒಬ್ಬ ಕ್ಯಾಪ್ಟನ್ ಸಹಿತ ಒಂಬತ್ತು ಯೋಧರು ಹುತಾತ್ಮರಾಗಿದ್ದರು.
ಜಮ್ಮುಗೆ ಸೇನಾ ಮುಖ್ಯಸ್ಥರ ಭೇಟಿ: ಭಯೋತ್ಪಾದಕರ ಚಟುವಟಿಕೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಪರಿಶೀಲನೆಗಾಗಿ ಭೂ ಸೇನೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಜಮ್ಮುಗೆ ತೆರಳಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಜೂನ್ 30ರಂದು ಭೂ ಸೇನೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮೂರು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ದ್ವಿವೇದಿ ಜಮ್ಮುಗೆ ನೀಡಿದ ಎರಡನೇ ಭೇಟಿ ಇದಾಗಿದೆ. ಜನರಲ್ ದ್ವಿವೇದಿ ಅಧ್ಯಕ್ಷತೆಯಲ್ಲಿ ಜಮ್ಮುನಲ್ಲಿರುವ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಡೆದ ಭದ್ರತಾ ಪರಿಶೀಲನೆಯ ಉನ್ನತ ಮಟ್ಟದ ಸಭೆಯಲ್ಲಿ ಪೊಲೀಸ್, ಸೇನೆ, ಅರೆಸೇನಾ ಪಡೆ ಮತ್ತು ಬೇಹುಗಾರಿಕೆ ದಳದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.