

ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಕಡಿಮೆ ಮಾಡುವ ಉದ್ದೇಶದಿಂದ ಕಾಮೆಡ್-ಕೆ ಕೌನ್ಸೆಲಿಂಗ್ ವೇಳೆಯೇ ಸಂಪೂರ್ಣ ಶುಲ್ಕವನ್ನು ಪಡೆಯಲು ನಿರ್ಧರಿಸಿದೆ. ಈ ಮೊದಲು ಕೌನ್ಸೆಲಿಂಗ್ ವೇಳೆ ವಿದ್ಯಾರ್ಥಿಗಳು ಪ್ರವೇಶ ಶುಲ್ಕದಲ್ಲಿರುವ ಬೋಧನಾ ಶುಲ್ಕವನ್ನು ಮಾತ್ರ ಪಾವತಿಸಿ ಸೀಟು ಖಚಿತ ಪಡಿಸಿಕೊಳ್ಳಬಹುದಾಗಿತ್ತು. ಅದು ಸಾಮಾನ್ಯವಾಗಿ 55 ಸಾವಿರ ರೂ.ಗಳಿರುತ್ತಿತ್ತು.
ಆದರೆ, ಕೆಲವು ಕಿಡಿಗೇಡಿಗಳು ಸೀಟ್ ಬ್ಲಾಕ್ ಮಾಡುವುದರಿಂದ ಅದನ್ನು ತಡೆಗಟ್ಟುವ ಉದ್ದೇಶದಿಂದ ಸಂಪೂರ್ಣ ಪ್ರವೇಶ ಶುಲ್ಕವನ್ನು ಪಡೆಯಲು ನಿರ್ಧರಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕೌನ್ಸೆಲಿಂಗ್ ವೇಳೆ ಎರಡು-ಮೂರು ಲಕ್ಷ ರೂಪಾಯಿ ಹಣ ಇಟ್ಟುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಬಹುತೇಕ ವಿದ್ಯಾರ್ಥಿಗಳು ಕೌನ್ಸೆಲಿಂಗ್ ವೇಳೆ ಸೀಟು ಆಯ್ಕೆ ಮಾಡಿ ಆನಂತರ ಕಾಲೇಜುಗಳಿಗೆ ಪ್ರವೇಶ ಪಡೆಯುವುದಿಲ್ಲ. ಇದರಿಂದ ಕಾಲೇಜುಗಳಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಂಪೂರ್ಣ ಶುಲ್ಕ ಪಡೆಯುತ್ತಿದ್ದೇವೆಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಮೆಡ್-ಕೆ ಶುಲ್ಕ 2.20 ಲಕ್ಷ ರೂ. ಇದೆ. ಪ್ರವೇಶ ಮೇಲ್ವಿಚಾರಣಾ ಸಮಿತಿ ನೀಡಿರುವ ಮಾರ್ಗಸೂಚಿಗಳ ಆಧಾರದ ಮೇಲೆ ನಿಯಮದಲ್ಲಿ ಬದಲಾವಣೆ ಮಾಡಿದ್ದೇವೆಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿಗಳು ಭಯ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಕಾಮೆಡ್-ಕೆನಲ್ಲಿ ಸೀಟು ಪಡೆದು ಬೇರೆ ಕಡೆ ಉತ್ತಮ ಸೀಟು ಸಿಕ್ಕಲ್ಲಿ, ಆ ವಿದ್ಯಾರ್ಥಿಯು ನಿಗದಿತ ಅವಧಿಯೊಳಗೆ ಸೀಟು ಹಿಂತಿರುಗಿಸಿದರೆ, ಕಾಮೆಡ್-ಕೆ ಪ್ರಕ್ರಿಯೆ ಶುಲ್ಕವನ್ನು ಕಟಾವು ಮಾಡಿ ಉಳಿದ ಶುಲ್ಕವನ್ನು ಮರುಪಾವತಿ ಮಾಡಲಿದೆ.
ಪ್ರತಿ ವರ್ಷ ಕಾಮೆಡ್-ಕೆ ಮೂಲಕ ಶೇ.15ರಿಂದ 26 ವಿದ್ಯಾರ್ಥಿಗಳು ಸೀಟನ್ನು ಬ್ಲಾಕ್ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಬ್ಲಾಕ್ ಆದ ಸೀಟುಗಳು ಸ್ವಯಂ ಚಾಲಿತವಾಗಿ ಮ್ಯಾನೇಜ್ವೆುಂಟ್ ಕೋಟಾಗೆ ಸೇರಲಿದೆ. ಈ ಸೀಟುಗಳನ್ನು ಕಾಲೇಜಿನ ಆಡಳಿತ ಮಂಡಳಿಯು ಹೆಚ್ಚಿನ ಹಣ ನೀಡಿದವರಿಗೆ ನೀಡಲಿದೆ. ಸದ್ಯ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಿದ್ದು, ಕೌನ್ಸೆಲಿಂಗ್ ನಡೆಸುವುದನ್ನು ಬಾಕಿ ಉಳಿಸಿಕೊಂಡಿದೆ.