

ಬೆಂಗಳೂರು: ದೇಶದ ವಿವಿಧ ಖಾಸಗಿ ಇಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ನಡೆಸುವ ಕಾಮೆಡ್-ಕೆ ಪರೀಕ್ಷೆಯನ್ನು 2025ರ ಮೇ 10 ರಂದು ನಡೆಸಲು ದಿನಾಂಕವನ್ನು ಪ್ರಕಟಿಸಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೇರಿ ಸಂಪೂರ್ಣ ವೇಳಾಪಟ್ಟಿಯನ್ನು ಜನವರಿ ತಿಂಗಳಿನಲ್ಲಿ ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಕಾರಣಕ್ಕಾಗಿ ದಿನಾಂಕವನ್ನು ನಿಗದಿ ಮಾಡಲಾಗಿದೆ. ಉಳಿದಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಕಾಮೆಡ್-ಕೆ ತಿಳಿಸಿದೆ.
ಈ ವರ್ಷ ಮೇ 12ರಂದು ಕಾಮೆಡ್-ಕೆ ಮತ್ತು ಯುನಿ-ಗೇಜ್ ಸಹಯೋಗದಲ್ಲಿ 150ಕ್ಕೂ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜು ಮತ್ತು ದೇಶದಲ್ಲಿ 55 ವಿಶ್ವವಿದ್ಯಾಲಯಗಳಲ್ಲಿರುವ 22 ಸಾವಿರ ಸೀಟುಗಳ ಭರ್ತಿಗೆ ಪರೀಕ್ಷೆ ನಡೆದಿತ್ತು. ಇದರಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚಿನ ಸೀಟುಗಳು ಮಾತ್ರ ಭರ್ತಿಯಾಗಿದ್ದವು.