

ಗುಂಡ್ಲುಪೇಟೆ: ದೀಪಾವಳಿ ಹಬ್ಬದಂದೇ ಅಗತಗೌಡನಹಳ್ಳಿ ಹಾಗೂ ಇಂಗಲವಾಡಿ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಂದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಮಂಗಳವಾರವೂ ಕೂಂಬಿಂಗ್ ನಡೆಸಿತು.
ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ವ್ಯಾಪ್ತಿ ವೀರನಪುರ ಬಸವಣ್ಣ ಅವರ ಬಾಳೆ ತೋಟದಲ್ಲಿ ಮಂಗಳವಾರ ಬೆಳಗ್ಗೆ ಭಾರೀ ಗಾತ್ರದ ಹುಲಿ ಹಾದು ಹೋಗಿರುವುದು ಕಂಡುಬಂದಿತ್ತು. ದೀಪಾವಳಿ ಹಬ್ಬದಂದು ಹಕ್ಕಲಪುರ, ಇಂಗಲವಾಡಿ, ಮಂಚಹಳ್ಳಿ ಹಾಗೂ ಅಗತಗೌಡನಹಳ್ಳಿ ಗ್ರಾಮಗಳಲ್ಲಿ ಹುಲಿ ಮತ್ತು ಚಿರತೆಗಳು ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕಿದ್ದ ಹಿನ್ನೆಲೆಯಲ್ಲಿ ಹುಲಿಯ ಹೆಜ್ಜೆ ಜಾಡುಗಳನ್ನು ಆಧರಿಸಿ ಅರಣ್ಯ ಇಲಾಖೆ ಸಾಕಾನೆ ಪಾರ್ಥಸಾರಥಿ ನೆರವಿನಿಂದ ಎರಡನೇ ದಿನವೂ ಕೂಂಬಿಂಗ್ ನಡೆಸಿತು.
ಹುಲಿಯ ಪತ್ತೆಗೆ ಹಗಲಿನಲ್ಲಿ ಡ್ರೋನ್ ಕ್ಯಾಮರಾ ಹಾಗೂ ರಾತ್ರಿ ವೇಳೆ ಥರ್ಮಲ್ ಡ್ರೋನ್ ಕ್ಯಾಮರಾವನ್ನು ಹಾರಿಸಿದರೂ ಯಾವುದೇ ಉಪಯೋಗವಾಗಿಲ್ಲ. ಹಿಂದಿನಿಂದಲೂ ಈ ಭಾಗದಲ್ಲಿ ವನ್ಯಜೀವಿಗಳು ಸಂಚರಿಸುತ್ತಿದ್ದರೂ ಜನರ ಕಣ್ಣಿಗೆ ನೇರವಾಗಿ ಬೀಳದಿದ್ದರೆ ಅದರ ಬಗ್ಗೆ ಗಮನಹರಿಸಿಲ್ಲ. ಆದರೆ ಇತ್ತೀಚೆಗೆ ಮಳೆ ಬಿದ್ದಿರುವುದರಿಂದ ಜಮೀನುಗಳಲ್ಲಿ ವನ್ಯಜೀವಿಗಳ ಹೆಜ್ಜೆ ಗುರುತುಗಳು ಕಾಣಿಸುತ್ತಿವೆ. ಇದರಿಂದ ರೈತರು ಭೀತಿಗೊಳಗಾಗುತ್ತಿದ್ದಾರೆ ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ತಿಳಿಸಿದ್ದಾರೆ.