

ಭಾಗವತದಲ್ಲಿ ಬರುವ ಸನ್ನಿವೇಶದಲ್ಲಿ ರುಕ್ಮಿಣಿ, ಸತ್ಯಭಾಮೆಯ ಪ್ರಸಂಗ ಬರುತ್ತದೆ. ಅಲ್ಲಿ ತಮ್ಮ ದೇವಾದಿದೇವ ಶ್ರೀಕೃಷ್ಣನನ್ನು ಮೆಚ್ಚಿಸಲು ತುಲಾಭಾರವನ್ನು ಏರ್ಪಡಿಸಿ ಮೊದಲು ಸತ್ಯಭಾಮ ತನ್ನ ಸಮಸ್ತ ಆಭರಣ, ಧನಕನಕಗಳಿಂದ ತುಲಾಭಾರ ನಡೆಸಲು ಪ್ರಯತ್ನಿಸಿ ವಿಫಲವಾದಾಗ; ರುಕ್ಮಿಣಿ ಮೊದಲು ಎಲ್ಲಾ ಆಭರಣ, ಧನ, ಕನಕ, ವಜ್ರ, ವೈಢೂರ್ಯಗಳನ್ನು ಪಕ್ಕಕ್ಕಿರಿಸಿ ಅದೇ ಸ್ಥಳದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ಒಂದು ತುಳಸೀದಳವನ್ನಿಟ್ಟಾಗ ತಕ್ಷಣ, ತೂಕವು ಮೀರಿ ಪರಮಾತ್ಮ ಕೃಷ್ಣನನ್ನೇ ಮೀರಿಸುವಂತಿರುತ್ತದೆ. ಹೀಗೆ, ಭಗವದ್ಭಕ್ತಿಯಿಂದ ಕೇವಲ ಒಂದು ತುಳಸೀದಳದಿಂದ ಭಗವಂತನನ್ನು ಮೀರುವ ತೂಕ ಬರುವುದೆಂದರೇನು? ಅದು ಬೇರೇನಲ್ಲ, ಶುದ್ಧ ಭಕ್ತಿ.
ಭಗವಾನ್ ಶ್ರೀ ರಾಮಕೃಷ್ಣರು ಈ ವಿಚಾರವನ್ನು ಹೀಗೆ ವಿವರಿಸುತ್ತಾರೆ. ಒಮ್ಮೆ ಶಂಭು ಮಲ್ಲಿಕ (ಅಂದಿನ ಕಾಲದ ಒಬ್ಬ ಶ್ರೀಮಂತ) ಹೇಳಿದ: ‘ನನ್ನ ಸಕಲ ಐಶ್ವರ್ಯಗಳನ್ನು ಭಗವಂತನ ಪಾದಪದ್ಮಗಳಲ್ಲಿ ಅರ್ಪಿಸಿಬಿಡಬೇಕು ಎಂಬುದೇ ನನ್ನ ಇಚ್ಛೆ.’ ‘ಆದರೆ ಭಗವಂತನಿಗೆ ಪ್ರಾಪಂಚಿಕ ಐಶ್ವರ್ಯ ಬೇಕಾಗಿರುವುದೇ? ಭಗವಂತನಿಗೆ ಬೇಕಾಗಿದೆ - ಭಕ್ತರ ಜ್ಞಾನ, ಭಕ್ತಿ, ವಿವೇಕ, ವೈರಾಗ್ಯ.’ ಭಗವಂತನಿಗೆ ಬೇರೇನೂ ಬೇಕಿಲ್ಲ. ನಮ್ಮ ತೋರ್ಪಡಿಕೆಗೆ ಮಾತ್ರ ಈ ಉತ್ಸವ, ಸೇವೆ, ಇತ್ಯಾದಿ. ಭಗವಂತ ಶುದ್ಧ ಭಕ್ತಿ, ಶುದ್ಧ ಹೃದಯವನ್ನು ಬಯಸುತ್ತಾನೆ.
ಶ್ರೀರಾಮಕೃಷ್ಣರು ಕೇವಲ ಬೋಧಿಸುತ್ತಿರಲಿಲ್ಲ, ಬದಲಾಗಿ ಅವರ ಜೀವನವೇ ಅವರ ಉಪದೇಶಾಮೃತಕ್ಕೆ ಸಾಕ್ಷೀಭೂತವಾಗಿತ್ತು. ಪರಮಹಂಸರೇ ತಿಳಿಸಿದಂತೆ ಶುದ್ಧ ಭಕ್ತಿ ಎಂಬುದಕ್ಕೆ ಉದಾಹರಣೆಯೂ ತಮ್ಮ ಅದ್ಭುತ ಜೀವನವನ್ನೇ ತೋರಿದ್ದಾರೆ. ಭವತಾರಿಣಿಯ ದರುಶನಕ್ಕೆ ಸಾಕ್ಷಾತ್ಕಾರಕ್ಕೆ ಅದೆಂತಹ ಕಠಿಣ ಸಾಧನೆಯಲ್ಲಿ ನಿರತರಾಗಿದ್ದರು. ಶ್ರೀರಾಮಕೃಷ್ಣ ಪರಮಹಂಸರು ಭಗವತ್ಪ್ರೇಮದ ಬಗ್ಗೆ ವಿಜಯನಿಗೆ ಈ ರೀತಿಯಲ್ಲಿ ತಿಳಿಸುತ್ತಾರೆ. ‘ಭಗವಂತನಲ್ಲಿ ಪ್ರೇಮಾಂಕುರವಾಯಿತು ಎಂದರೆ, ಕರ್ಮತ್ಯಾಗ ತಾನೇ ತಾನಾಗಿಯೇ ಬಿಡುತ್ತದೆ. ಭಗವಂತ ಯಾರ ಕೈಲಾದರೂ ಕರ್ಮ ಮಾಡಿಸುತ್ತಿರುವುದಾದರೆ ಅವರು ಬೇಕಾದರೆ ಮಾಡಲಿ.
ಈಗ ನಿನಗೆ ಎಲ್ಲವನ್ನೂ ತ್ಯಾಗ ಮಾಡುವ ಸಮಯ ಬಂದಿದೆ, ಎಲ್ಲವನ್ನೂ ತ್ಯಜಿಸಿ ಹೇಳು: ‘‘ಮನಸ್ಸೇ, ನೀನು ನಾನು ಇಬ್ಬರು ಮಾತ್ರ ಭಗವತಿಯ ದರ್ಶನ ಮಾಡೋಣ. ಹಾಗೆ ಉಂಟಾಗುವುದು ಭಕ್ತಿ. ಸತಿಗೆ ಪತಿಯಲ್ಲಿರುವ ನಿಷ್ಠೆಯ ಹಾಗೆ, ಭಕ್ತನಿಗೆ ನಿಷ್ಠೆಯುಂಟಾಗುತ್ತದೆ. ಹಾಗಾದಲ್ಲಿ, ಹೃದಯದಲ್ಲಿ ಭಕ್ತಿ ಅಂಕುರವಾಗುತ್ತದೆ. ಶುದ್ಧ ಭಕ್ತಿಯುಂಟಾಗುತ್ತದೆ, ಇದು ಬಹಳ ಕಠಿಣ, ಆದರೆ ಅಸಾಧ್ಯವಲ್ಲ! ಈ ತೆರನಾದ ಭಕ್ತಿಯುಂಟಾದಾಗ ಪ್ರಾಣ, ಮನಸ್ಸು, ಭಗವಂತನಲ್ಲಿ ಲೀನವಾಗುತ್ತದೆ. ಇದೇ ನಿಜವಾದ ಭಕ್ತನ ಸ್ಥಿತಿ.’’ ಪರಮಹಂಸರು ಈ ತೆರನಾದ ಭಗವದ್ಭಕ್ತಿಯ ವಿಚಾರವನ್ನು ಭಕ್ತರಿಗೆ ತಿಳಿಸುತ್ತಿದ್ದಾಗ, ಭಕ್ತನೊಬ್ಬ ವಿನೀತ ಭಾವದಿಂದ ಈ ಪ್ರಶ್ನೆ ಹಾಕುತ್ತಾನೆ: ‘ಮಹಾಶಯರೇ, ಯಾವ ರೀತಿಯ ವ್ಯಾಕುಲತೆ ಉಂಟಾದರೆ ಭಗವದಾನಂದಾವಸ್ಥೆ ನಮಗೆ ದೊರೆಯುತ್ತದೆ?’ ಶ್ರೀರಾಮಕೃಷ್ಣ ಪರಮಹಂಸರು, ‘ಭಗವಂತನ ದರ್ಶನ ಪಡೆಯಬೇಕು, ಅವನ ಸಾಕ್ಷಾತ್ಕಾರವಾಗಬೇಕು ಎಂದು ಅಂತಃಪ್ರಾಣ ಸುಮ್ಮನೆ ಚಟಪಟಗುಟ್ಟುವುದೋ, ಆಗ ವ್ಯಾಕುಲತೆ ಉಂಟಾಯಿತು ಎಂದರ್ಥ.
ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ; ‘‘ಬಾ, ನಿನಗೆ ತೋರಿಸಿಕೊಡುತ್ತೇನೆ, ಯಾವ ರೀತಿಯ ವ್ಯಾಕುಲತೆ ಉಂಟಾದರೆ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು’’ ಹೀಗೆಂದು ಹೇಳಿ ಒಂದು ಕೊಳಕ್ಕೆ ಕರೆದುಕೊಂಡು ಹೋಗಿ, ಶಿಷ್ಯನನ್ನು ನೀರಿನಲ್ಲಿ ಮುಳುಗಿಸಿ ಆತನನ್ನು ನೀರಿನೊಳಗೆ ಅದುಮಿ ಹಿಡಿದುಕೊಂಡ. ಕೆಲವು ಕ್ಷಣಗಳ ನಂತರ ಆತನನ್ನು ಮೇಲಕ್ಕೆ ಎತ್ತಿ ಕೇಳಿದ; ‘‘ನೀರಿನೊಳಗಿದ್ದಾಗ ನಿನ್ನ ಪ್ರಾಣವೇನು ಹೇಳುತ್ತಿತ್ತು?’’ ಶಿಷ್ಯ ಹೇಳಿದ; ‘‘ಪ್ರಾಣ ಒಂದು ಗುಟುಕು ಉಸಿರಿಗಾಗಿ ಸುಮ್ಮನೆ ಚಟಪಟಗುಟ್ಟುತ್ತಿತ್ತು.’’ ಇದೇ ತೆರನಾಗಿ ಭಕ್ತ ಭಗವಂತನನ್ನು ಕಾಣಲು ಹಾತೊರೆಯುತ್ತಿರಬೇಕು’ ಎಂಬುದನ್ನು ಶ್ರೀರಾಮಕೃಷ್ಣರು ತಿಳಿಸುತ್ತಾರೆ.
ಪರಮಹಂಸರು ಮುಂದುವರಿಸುತ್ತಾ ತಿಳಿಸುತ್ತಾರೆ; ‘ಭಗವಂತನನ್ನು ಪ್ರೀತಿಸುವುದೇ ಅತ್ಯಂತ ಅವಶ್ಯಕವಾಗಿ ಬೇಕಾದ್ದು. ಭಕ್ತಿಯೇ ಸಾರ. ನನಗಿನ್ನೇನೂ ಬೇಕಾಗಿಲ್ಲ, ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಉಂಟಾಗುವಂತೆ ಕೃಪೆ ಮಾಡು’ ಎಂದು ನಾರದರು ಶ್ರೀರಾಮಚಂದ್ರನನ್ನು ಪ್ರಾರ್ಥಿಸಿದಂತೆ ಮೊರೆಯಿಡಬೇಕು. ಈ ಸಂಸಾರ ಬಂಧನದಿಂದ ಬಿಡಿಸಿಕೊಳ್ಳಲು ಸರ್ವದಾ ಭಗವಂತನನ್ನು ಪ್ರಾರ್ಥಿಸಬೇಕೇ ವಿನಾ ತಮ್ಮ ಐಶ್ವರ್ಯವನ್ನು ತೋರ್ಪಡಿಸಿಕೊಂಡು ಕೇವಲ ಡಾಂಬಿಕತನದ ಭಕ್ತಿ ಪೂಜೆಗಳನ್ನು ಭಗವಂತ ಮೆಚ್ಚುವುದಿಲ್ಲ.
ಈ ಪ್ರಪಂಚದಲ್ಲಿ ಭಗವದ್ದರುಶನ ಪಡೆಯುವ ಹಂಬಲದಿಂದ ದೇವಾಲಯ, ಮಂದಿರ, ಮಠಗಳಿಗೆ ತೆರಳುವವರ ಸಂಖ್ಯೆ ಅತ್ಯಂತ ವಿರಳ. ಎಲ್ಲರಿಗೂ ತಮ್ಮ ತಮ್ಮ ಸ್ವಾರ್ಥದಿಂದ ಕೂಡಿದ ಬೇಡಿಕೆಗಳೇ ಹೆಚ್ಚು. ಈ ಬೇಡಿಕೆಗಳನ್ನು ಈಡೇರಿಸುವಂತೆ ನಾನಾ ರೀತಿಯಲ್ಲಿ ಅರ್ಚನೆ, ಆರಾಧನೆ, ಸೇವೆ, ಉತ್ಸವಾದಿಗಳನ್ನು ಕೈಗೊಳ್ಳುತ್ತಾರೆ. ಆದರೆ ಭಗವಂತನಿಗೆ ಇದ್ಯಾವುದೂ ಬೇಕಿಲ್ಲ. ಭಕ್ತನು ಶುದ್ಧ ಚಿತ್ತ, ಶುದ್ಧ ಭಕ್ತಿ, ಶುದ್ಧ ಪ್ರೇಮಗಳನ್ನೊಳಗೊಂಡ ಸಾಧನೆ, ಪ್ರಾರ್ಥನೆ, ಸಂಕೀರ್ತನೆ ಮಾಡಿದ್ದಲ್ಲಿ ಭಗವಂತನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ.