ಕಲರ್​ ಝೆರಾಕ್ಸ್ ನೋಟಿಗೆ ಕುರಿಯಾದ ರೈತ!

Mancahyya 28 Jan 20
Published on

ಮಂಡ್ಯ: ಕಲರ್ ಝೆರಾಕ್ಸ್ ನೋಟುಗಳನ್ನು ಕರೆನ್ಸಿ ಎಂದು ನಂಬಿಸಿ ವೃದ್ಧ ರೈತ ರೊಬ್ಬರಿಂದ ಕುರಿ ಖರೀದಿಸಿ ವಂಚಿಸಿರುವ ಪ್ರಕರಣ ಮದ್ದೂರಿನ ಅಂಕನಾಥಪುರದಲ್ಲಿ ಬೆಳಕಿಗೆ ಬಂದಿದೆ. ಕುರಿಯ ಜತೆಗೆ ಹಣವನ್ನೂ ಕಳೆದುಕೊಂಡ ರೈತ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಏನಿದು ಪ್ರಕರಣ: ಗ್ರಾಮದ ಮಂಚಯ್ಯ ವಾರದ ಹಿಂದೆ ಜಮೀನಿನಲ್ಲಿ 30ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ವಾಹನವೊಂದರಲ್ಲಿ ಬಂದ ನಾಲ್ವರು ಒಂದು ಕುರಿಯನ್ನು 5 ಸಾವಿರ ರೂ.ಗೆ ಖರೀದಿ ಮಾಡಿ 500 ರೂ. ಮುಖಬೆಲೆಯ 10 ನೋಟು ಕೊಟ್ಟು ಕುರಿಯನ್ನು ತೆಗೆದುಕೊಂಡು ಹೋಗಿದ್ದರು.

ಕುರಿಗೆ 5 ಸಾವಿರ ರೂ. ಸಿಕ್ಕಿದ ಖುಷಿಯಿಂದ ನೋಟುಗಳನ್ನು ಜೇಬಲ್ಲಿಟ್ಟುಕೊಂಡು ಸಂಜೆ ಮನೆಗೆ ಬಂದಾಗ ನೋಟುಗಳ ಅಸಲಿಯತ್ತು ಬಯಲಾಗಿದೆ. ಝೆರಾಕ್ಸ್ ನೋಟುಗಳ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದಾಗ ಕೆಲದಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಂಚಕರನ್ನು ಹುಡುಕಿದ್ದರು. ಸೋಮವಾರ ಬೆಳಗ್ಗೆ ಮಂಚಯ್ಯ ಅವರ ಅಳಿಯ ರವಿ ಮನೆಗೆ ಬಂದಾಗ ಗ್ರಾಮಸ್ಥರು ವಂಚನೆ ವಿಷಯವನ್ನು ಮುಟ್ಟಿಸಿದ್ದರು. ಮಾವನಿಗಾದ ಮೋಸದ ಕುರಿತು ವಿಡಿಯೋ ಚಿತ್ರೀಕರಿಸಿದ ರವಿ, ರೈತರು-ವೃದ್ಧರು ಎಚ್ಚರದಿಂದ ಇರಬೇಕೆಂದು ವಿಡಿಯೋ ಸಂದೇಶ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ಮಂಚಯ್ಯ ಸೋಮವಾರ ತಮ್ಮ ಸಂಬಂಧಿ ದಿಲೀಪ್ ಜತೆಗೂಡಿ ಕೆಸ್ತೂರಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಕುರಿ ಬೇಕೆಂದು ವ್ಯಾಪಾರ ಮಾಡಿ 5 ಸಾವಿರ ರೂ. ಕೊಟ್ಟಿದ್ದರು. ಸಂಜೆ ಮನೆಗೆ ಹೋದಾಗ ಅವು ನಕಲಿ ನೋಟು ಅಂಥ ಗೊತ್ತಾಯಿತು. ಅವರ ಬಳಿ ಇನ್ನೂ ಸಾಕಷ್ಟು ನೋಟುಗಳಿದ್ದವು. ಎಲ್ಲೆಲ್ಲಿ ವಂಚನೆ ಮಾಡಿದ್ದಾರೋ ಗೊತ್ತಿಲ್ಲ. ದುಷ್ಕರ್ವಿುಗಳನ್ನು ಪತ್ತೆಹಚ್ಚಿ ನ್ಯಾಯ ಕೊಡಿಸಬೇಕು. | ಮಂಚಯ್ಯ, ಕುರಿ ಕಳೆದುಕೊಂಡವರು  ಮುಗ್ಧ ರೈತರು ಒಬ್ಬೊಬ್ಬರೇ ಇರುವಾಗ ಎಚ್ಚರದಿಂದ ಇರಬೇಕು. ಪೊಲೀಸರು ಈ ಜಾಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು. | ರವಿಕುಮಾರ್​, ಮಂಚಯ್ಯ ಅಳಿಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net