

ಬೆಂಗಳೂರು: ಐದು ಬಣ್ಣದ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಪಕ್ಷ ಭಾರತೀಯರನ್ನು ಅವಮಾನಿಸಿದೆ. ದೇಶ ವಿಭಜನೆ, ಜನಾಂಗೀಯ ದ್ವೇಷ ಕಾಂಗ್ರೆಸ್ ಪಕ್ಷದ ಡಿಎನ್ ಎದಲ್ಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೋಡ ವರ್ಣಬೇಧದ ಮಾತು ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತದೆ. ಜನಾಂಗೀಯ ಕಲಹ ಹುಟ್ಟಿ ಹಾಕುವ ಮಾತುಗಳು ಖಂಡನೀಯ. ಆತನ ವಿರುದ್ಶ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದ ಜನರಿಗೆ ಅವಹೇಳನ ಮಾಡಿದ ಪಿತ್ರೋಡಾ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಿ ಕಾನೂನು ಕ್ರಮಕೈಗೊಳ್ಳಬೇಕಾಗಿತ್ತು. ಆದರೆ, ಮ್ಯಾಚ್ ಫಿಕ್ಸಿಂಗ್ ರೀತಿ ರಾಜೀನಾಮೆ ಪಡೆದು ಪ್ರಕರಣ ಮುಗಿಸಲು ಕಾಂಗ್ರೆಸ್ ಹವಣಿಸಿದೆ. ಈ ಧೋರಣೆ ವಿರೋಧಿಸಿ, ಪಿತ್ರೊಡಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಯುವ ಮೋರ್ಚಾದಿಂದ ಗುರುವಾರ ಸಂಜೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರ್.ಅಶೋಕ್ ಹೇಳಿದರು.
ಪಿತ್ರೋಡಾ ಹೇಳಿದ್ದನ್ನು ಗಮನಿಸಿದರೆ ಸಿಎಂ ಸಿದ್ದರಾಮಯ್ಯ ಆಫ್ರಿಕಾಗೆ ಯಾವಾಗ ಹೋಗುತ್ತಾರೆ ಎಂದು ಕೇಳಬೇಕಾಗುತ್ತದೆ. ಅವರ ಪಕ್ಷದ ನಾಯಕರು ಸರ್ವ ಜನಾಂಗದ ಶಾಂತಿಯ ತೋಟವನ್ನು ಕದಡಿ, ಐದು ಬಣ್ಣದ ಗ್ಯಾರಂಟಿ ನೀಡಿರುವ ಬಗ್ಗೆ ಸಿದ್ದರಾಮಯ್ಯ ತಮ್ಮ ನಿಲುವು ಏನೆಂಬುದು ಸ್ಪಷ್ಟಪಡಿಸಬೇಕು ಎಂದರು.
ಸೋನಿಯಾಗಾಂಧಿ ಇಟಲಿಯಿಂದ ಬಂದವರಾದರೂ ದೇಶದ ಸೊಸೆ ಎಂದು ಒಪ್ಪಿಕೊಂಡಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ಇಟಲಿಗೆ ಹೋಗುತ್ತಾರೆ ಆದರೂ ಭಾರತೀಯರು ಎಂದು ಒಪ್ಪಿಕೊಂಡಿದ್ದೇವೆ. ಆದರೂ ಕಾಂಗ್ರೆಸ್ ಪಕ್ಷದವರು ದೇಶವನ್ನು ಒಡೆಯಲು ಮುಂದಾಗಿದ್ದಾರೆ ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದರು.