

ಬೆಂಗಳೂರು: ಬೈಲಹೊಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಪ್ರಯಾಣಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಶಾಸಕರು ಗಾಯಗೊಂಡಿದ್ದಾರೆ.
ವಿಧಾನಸೌಧ ಎದುರು ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಎರಡು ಕಾರುಗಳು ಭಾಗಶಃ ಜಖಂಗೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮತ್ತೊಂದೆಡೆ ಕೃತ್ಯ ಎಸಗಿದ ಅತ್ತಿಬೆಲೆ ನಿವಾಸಿ ಅಜಯ್ ಎಂಬಾತನನ್ನು ಬಂಧಿಸಲಾಗಿದೆ.
ಬೆಳಿಗ್ಗೆ ೯.೩೦ ಗಂಟೆ ಸುಮಾರಿಗೆ ಶಾಸಕ ಮಹಾಂತೇಶ್ ಕೌಜಲಗಿ ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಹೈಕೋರ್ಟ್ ಮುಂಭಾಗದ ವಿಧಾನಸೌಧ ಗೇಟ್‌ನಿಂದ ಡಾ ಬಿ.ಆರ್.ಅಂಬೇಡ್ಕರ್ ರಸ್ತೆಗೆ ಬಂದಿದ್ದು, ಇದೇ ವೇಳೆ ಗೋಪಾಲಗೌಡ ರಸ್ತೆಯಿಂದ ಪೊಲೀಸ್ ತಿಮ್ಮಯ್ಯ ಸರ್ಕಲ್ ಕಡೆ ಅತೀವೇಗವಾಗಿ ಬಂದ ಆರೋಪಿ ಅಜಯ್, ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡೂ ಕಾರುಗಳು ಭಾಗಶಃ ಜಖಂಗೊಂಡಿವೆ. ಘಟನೆಯಲ್ಲಿ ಶಾಸಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ಕಾರು ಚಾಲಕ ಅಜಯ್ ವಿರುದ್ಧ ಅಜಾಗರೂಕತೆ ವಾಹನ ಚಾಲನೆ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಆತನ ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.