ನ.17ಕ್ಕೆ ಕಾಲೇಜು ಆರಂಭ, ತರಗತಿಗೆ ಬರೋದು-ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು!

ನ.17ಕ್ಕೆ ಕಾಲೇಜು ಆರಂಭ, ತರಗತಿಗೆ ಬರೋದು-ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು!
Published on

ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿನ ಭೀತಿಯಿಂದಾಗಿ ಮುಂದೂಡಲ್ಪಟ್ಟಿದ್ದ ಪದವಿ ಕಾಲೇಜು ತರಗತಿ ಆರಂಭಕ್ಕೆ ಇದೀಗ ಮುಹೂರ್ತ ನಿಗದಿಯಾಗಿದೆ.

ಶುಕ್ರವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಲೇಜು ಆರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ ಅವರು ಪ್ರಾತ್ಯಕ್ಷಿಕೆ ಮೂಲಕ ಕಾಲೇಜು ಆರಂಭಿಸಿದೆ ತೆಗೆದುಕೊಳ್ಳಲಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಬೇರೆ ರಾಜ್ಯದಲ್ಲಿ ಕಾಲೇಜು ಓಪನ್ ಆಗಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ಮಾಡಲಾಯಿತು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಪ್ರತಿ ವಿದ್ಯಾರ್ಥಿಗೂ ಉಷ್ಣಾಂಶ ಚೆಕ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಯಿತು. ಈ ಎಲ್ಲ ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವಥನಾರಾಯಣ, ನವೆಂಬರ್​ 17ರಂದು ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ತರಗತಿ ಬರುವುದು ಕಡ್ಡಾಯವಲ್ಲ ಎಂದರು.

ಪೋಷಕರ ಅನುಮತಿ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ. ಆನ್​ಲೈನ್ ಮುಖಾಂತರ ಬೇಕಾದರೂ ಕ್ಲಾಸ್ ತೆಗೆದುಕೊಳ್ಳಬಹುದು ಎಂದು ಅಶ್ವಥನಾರಾಯಣ ತಿಳಿಸಿದರು.

ಪ್ರಾಕ್ಟಿಕಲ್ ಕ್ಲಾಸ್​ಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಎಲ್ಲ ಕಾಲೇಜಿನಲ್ಲೂ ಟಾಸ್ಕ್ ಪೋರ್ಸ್​ ಇರುತ್ತದೆ. ಪೋಷಕರು ರೈಟಿಂಗ್​ ಮೂಲಕ ಒಪ್ಪಿಗೆ ಸೂಚಿಸಿದರಷ್ಟೇ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗುತ್ತದೆ. ಯಾರಿಗೂ ಒತ್ತಾಯವಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು ಪಾಳಿ ಪ್ರಕಾರ ಕ್ಲಾಸ್ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಕರೊನಾ ಆತಂಕದ ನಡುವೆಯೂ ಪದವಿ, ಸ್ನಾತಕೋತ್ತರ ಪದವಿ, ‌ಇಂಜಿನಿಯರಿಂಗ್, ಡಿಪ್ಲೊಮಾ ವ್ಯಾಸಂಗಕ್ಕೆ ಸರ್ಕಾರ ಅಸ್ತು ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net