102 ಅರ್ಜಿಗಳಲ್ಲಿ 18 ಇತ್ಯರ್ಥ; ಜಿಲ್ಲಾಧಿಕಾರಿ ಜನಸ್ಪಂದನ ಸಭೆ

oplus_2
oplus_2
Published on

ರಾಣೆಬೆನ್ನೂರ: ಗ್ರಾಪಂ ಪಿಡಿಒ ಸರಿಯಾಗಿ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸ ಮಾಡುತ್ತಿಲ್ಲ. ಕೆಶಿಪ್‌ನವರು ರಾಜ್ಯ ಹೆದ್ದಾರಿ ಕಾಮಗಾರಿ ಸರಿಯಾಗಿ ಮಾಡಿಲ್ಲ. ರಾಣೆಬೆನ್ನೂರಿನಲ್ಲಿ ಅನಧಿಕೃತ ಲೇಔಟ್‌ಗಳ ಹಾವಳಿ ಹೆಚ್ಚಾಗಿದೆ. ಅನಧಿಕೃತವಾಗಿ ಮರ ಕಡಿಯುವವರ ವಿರುದ್ಧ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿಲ್ಲ. ಜಲಜೀವನ ಮಷಿನ್ ಕಾಮಗಾರಿ ಕಳಪೆಯಾಗಿದೆ. ಖಾಸಗಿ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಿ. ನಮಗೆ ಬಡಾವಣೆಯಲ್ಲಿ ರಸ್ತೆ, ಚರಂಡಿ ವ್ಯವಸ್ಥೆಯೇ ಇಲ್ಲ…!
ಇದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ನಗರದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ದೂರುಗಳು.
ಬಿಲ್ಲಳ್ಳಿ ಗ್ರಾಪಂ ಪಿಡಿಒ ವಿರುದ್ಧ ದೂರು…
ಬಿಲ್ಲಳ್ಳಿ ಗ್ರಾಪಂ ಪಿಡಿಒ ನರೇಗಾ ಕಾರ್ಮಿಕರಿಗೆ ಸೌಲಭ್ಯ ಕೊಡುತ್ತಿಲ್ಲ. ಸದಾ ಮೊಬೈಲ್ ಸ್ವೀಚ್‌ಆಪ್ ಮಾಡಿಕೊಂಡಿರುತ್ತಾರೆ. ನರೇಗಾ ಕೂಲಿಯ ಎನ್‌ಎಂಆರ್ ಹಾಕಿಸಿಕೊಳ್ಳಲು ಮೂರ‌್ನಾಲ್ಕು ಬಾರಿ ಓಡಾಡಬೇಕು. ಇವರಿಂದ ಕೂಲಿ ಹಣ ಕೂಡ ಜಮಾ ಆಗುವುದು ತಡವಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ನೀರು ಸೇರಿ ಯಾವುದೇ ಸೌಲಭ್ಯ ಮಾಡಲ್ಲ. ಕಾಮಗಾರಿ ವೇಳೆ ಕಾರ್ಮಿಕನೊಬ್ಬನ ಕಾಲಿಗೆ ಕೊಡಲಿ ಪೆಟ್ಟು ಬಿದ್ದು ಒದ್ದಾಡಿದರೂ ಪಿಡಿಒ ಬಂದು ಸಮಸ್ಯೆ ಕೇಳಲಿಲ್ಲ. ಇಂಥ ಪಿಡಿಒ ನಮಗೆ ಬೇಡ. ಕೂಡಲೇ ಅವರನ್ನು ಬದಲಾಯಿಸಬೇಕು ಎಂದು ಬಿಲ್ಲಳ್ಳಿ ಗ್ರಾಪಂ ವ್ಯಾಪ್ತಿಯ ಮಹಿಳೆಯರು ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡು ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಜಿಪಂ ಸಿಇಒ ಅಕ್ಷಯ್ ಶ್ರೀಧರ, ಕೂಡಲೇ ಪಿಡಿಒಗೆ ನೋಟಿಸ್ ಜಾರಿ ಮಾಡಿ. ಅವರು ಉತ್ತರ ಕೊಟ್ಟ ಬಳಿಕ ನನಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಾಪಂ ಇಒ ಸುಮಲತಾ ಅವರಿಗೆ ಸೂಚಿಸಿದರು.
ರಸ್ತೆ ಕಾಮಗಾರಿ ಸರಿಪಡಿಸಿ…
ತಾಲೂಕಿನ ಹೊನ್ನತ್ತಿ ಗ್ರಾಮದ ರೈತ ವಿರುಪಾಕ್ಷಪ್ಪ ಅರವಂಟಗಿ, ಕೆಶಿಪ್‌ನವರು ಹೊನ್ನತ್ತಿ ಗ್ರಾಮದ ನಾಗಮ್ಮ ದೇವಿ ದೇವಸ್ಥಾನದ ಬಳಿ ಹಳ್ಳಕ್ಕೆ ಸೇತುವೆ ನಿರ್ಮಿಸಿದ್ದಾರೆ. ಇದು ಕಾಮಗಾರಿ ಅವೈಜ್ಞಾನಿಕ ಆಗಿದ್ದರಿಂದ ಸೇತುವೆ ಅಕ್ಕಪಕ್ಕದ ರೈತರಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳದ ನೀರು ಸಹ ಹೋಗಲು ದಾರಿಯಲ್ಲದಂತಹ ಸ್ಥಿತಿಯಿದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅನಧಿಕೃತ ಲೇಔಟ್ ತೆರವುಗೊಳಿಸಿ…
ರಾಣೆಬೆನ್ನೂರಿನಲ್ಲಿ ಅನಧಿಕೃತ ಲೇಔಟ್ ಹಾವಳಿ ಹೆಚ್ಚಾಗಿದೆ. ನಗರ ಯೋಜನಾ ಪ್ರಾಧಿಕಾರದಿಂದ ಅನುಮತಿ ಇಲ್ಲದೆ ಕೆಲವರು ಲೇಔಟ್ ಮಾಡಿ ಅದರಲ್ಲಿನ ಸೈಟ್‌ಗಳನ್ನು ಸೂರ್ಯ-ಚಂದ್ರ ಇರುವವರೆಗೂ ನಿಮಗೆ ಎಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹನುಮಂತಪ್ಪ ಕಬ್ಬಾರ ಆಗ್ರಹಿಸಿದರು.
ಇದಕ್ಕೆ ಪ್ರಕ್ರಿಯಿಸಿದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ನಗರ ಯೋಜನಾ ಪ್ರಾಧಿಕಾರ, ನಗರಸಭೆ ಹಾಗೂ ಕಂದಾಯ ಅಧಿಕಾರಿಗಳು ತಂಡ ಮಾಡಿಕೊಂಡು ಅನಧಿಕೃತ ಲೇಔಟ್‌ಗೆ ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂಳಿದಂತೆ ರಾಣೆಬೆನ್ನೂರ ಶಬರಿ ನಗರಕ್ಕೆ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದರು. ಪದ್ಮಾವತಿಪುರ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು ಎಂದು ತಾಂಡಾ ನಿವಾಸಿಗಳು ಒತ್ತಾಯಿಸಿದರು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹನುಮಂತಪ್ಪ ಕಬ್ಬಾರ ಮನವಿ ಮಾಡಿದರು. ಅಲ್ಲದೆ ಇತರ ಸಮಸ್ಯೆಗಳು ಸೇರಿ ಒಟ್ಟು 102 ಅರ್ಜಿಗಳು ಸ್ವೀಕೃತವಾದವು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಸಿಇಒ ಅಕ್ಷಯ ಶ್ರೀಧರ, ತಹಸೀಲ್ದಾರ್ ಗುರುಬಸವರಾಜ, ತಾಪಂ ಇಒ ಸುಮಲತಾ ಹಾಗೂ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net