

ಬೆಂಗಳೂರು: ಪೊಲೀಸ್ ಐಡಿ ಕಾರ್ಡ್ ಬಳಸಿ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಳ ಮೂಲದ ಮೂವರನ್ನು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕೊಲ್ಕತ್ತಾದ ರಂಜಿತ್ ಕುಮಾರ್, ಇಸ್ಲಾಂ ಅಲಿ ಮತ್ತು ಶಬ್ಬಿರ್ ಬಂಧಿತರು. ಆರೋಪಿಗಳ ಬಂಧನದಿಂದ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಬಿಎ ಪದವೀಧರ ರಂಜಿತ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇಸ್ಲಾಂ ಅಲಿ ಜೆರಾಕ್ಸ್ ಅಂಗಡಿ, ಶಬ್ಬಿರ್ ಸೈಬರ್ ಸೆಂಟರ್ ಇಟ್ಟುಕೊಂಡಿದ್ದ. ಕಂಪನಿ ತರಬೇತಿ ಮೇಲೆ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ರಂಜಿತ್, ಬೆಂಗಳೂರು ಸಂಚಾರ ಪೊಲೀಸರು ದಂಡ ವಿಧಿಸುವುದು ಮತ್ತು ವಸೂಲಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ತರಬೇತಿ ಮುಗಿದ ಮೇಲೆ ಕೊಲ್ಕತ್ತಾಗೆ ತೆರಳಿ, ತನ್ನ ಸಹಚರರಾದ ಇಸ್ಲಾಂ ಅಲಿ ಮತ್ತು ಶಬ್ಬಿರ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಕ್ಯೂಆರ್ ಕೋಡ್ ಪಡೆದುಕೊಂಡಿದ್ದ. ಅಲ್ಲದೆ, 2020ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಭಕ್ತರಾಮ್ ಎಂಬ ಹೆಡ್ ಕಾನ್‌ಸ್ಟೆಬಲ್ ಪೊಲೀಸ್ ಐಡಿ ಕಾರ್ಡ್ ಅನ್ನು ಗೂಗಲ್‌ನಲ್ಲಿ ಪಡೆದುಕೊಂಡಿದ್ದ. ಭಕ್ತ ರಾಮ್ ಎಂಬ ಹೆಸರಿನ ಬದಲಿಗೆ ಕುಮಾರಸ್ವಾಮಿ ಎಂದು ಎಡಿಟ್ ಮಾಡಿಕೊಂಡು ನಕಲಿ ಐಡಿ ಕಾರ್ಡ್ ಸೃಷ್ಟಿಸಿಕೊಂಡಿದ್ದ.
ಮತ್ತೊಂದೆಡೆ, ಟ್ರಾಫಿಕ್ ಫೈನ್ ಮೊಬೈಲ್ ಅಪ್ಲಿಕೇಷನ್‌ಗಳಿಂದ ಸಂಚಾರ ದಂಡ ಇರುವ ವಾಹನಗಳ ಮಾಹಿತಿ ಪಡೆದುಕೊಂಡು ಆನಂತರ ಸಾರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ವಾಹನ ಮಾಲೀಕರ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದ. ವಾಹನ ಮಾಲೀಕರನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕ ಮಾಡಿ ಬೆಂಗಳೂರು ನಗರ ಸಂಚಾರ ವಿಭಾಗ ಹೆಡ್‌ಕಾನ್‌ಸ್ಟೆಬಲ್ ಕುಮಾರಸ್ವಾಮಿ ಎಂದು ಐಡಿ ಕಾರ್ಡ್ ಕಳುಹಿಸುತ್ತಿದ್ದ. ನಿಮ್ಮ ವಾಹನದ ಮೇಲೆ ಟ್ರಾಫಿಕ್ ೈನ್ ಇದೆ. ಪಾವತಿ ಮಾಡದೆ ಇದ್ದರೇ ವಾಹನ ಜಪ್ತಿ ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಿದ್ದ. ದಂಡ ಪಾವತಿಸಲು ಒಪ್ಪಿದಾಗ, ವಾಟ್ಸ್‌ಆ್ಯಪ್‌ನಲ್ಲಿ ಕ್ಯೂಆರ್ ಕೋಡ್ ಕಳುಹಿಸಿ ವ್ಯಾಲೆಟ್‌ನಿಂದ ದಂಡ ಪಡೆಯುತ್ತಿದ್ದ. ಈ ಹಣವೂ ಇಸ್ಲಾಂ ಅಲಿ ಮತ್ತು ಶಬ್ಬಿರ್ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿತ್ತು. ಈ ಇಬ್ಬರು ಹಣ ಡ್ರಾ ಮಾಡಿ ಕಮಿಷನ್ ಪಡೆದು ಉಳಿದ ಹಣವನ್ನು ರಂಜಿತ್‌ಗೆ ಕೊಡುತ್ತಿದ್ದರು.
ಇತ್ತೀಚೆಗೆ ಮೃತ ಹೆಡ್‌ಕಾನ್‌ಸ್ಟೇಬಲ್ ಅವರ ಪುತ್ರಿಗೆ ತನ್ನ ತಂದೆಯ ಐಡಿ ಕಾರ್ಡ್ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದು ಈಶಾನ್ಯ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ಆರೋಪಿಗಳು ಹಣ ಪಡೆಯುತ್ತಿದ್ದ ಕ್ಯೂಆರ್ ಕೋಡ್ ಮೂಲಕ ಬ್ಯಾಂಕ್ ಖಾತೆ ವಿವರ ಸಂಗ್ರಹಿಸುತ್ತಿದ್ದರು. ಮೇ 18ರಂದು ಕೊಲ್ಕತ್ತಾಗೆ ಹೋಗಿ ಮೂವರು ಆರೋಪಿಗಳನ್ನು ಬಂಧಿಸಿ, ಕರೆ ತಂದು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.