

ಬೆಂಗಳೂರು: ಶಿವಾಜಿನಗರದಲ್ಲಿ ಸುಮಾರು ೫೦ ವರ್ಷದ ಹಳೆಯದಾದ ಬಿಬಿಎಂಪಿ ಶಾಲಾ ಕಟ್ಟಡ ಏಕಾಏಕಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಶಿವಾಜಿನಗರ ಕುಕ್ ಬರ್ನ್ ರಸ್ತೆಯಲ್ಲಿರುವ ಬಿ ಕ್ರಾಸ್‌ನಲ್ಲಿರುವ ಬಿಬಿಎಂಪಿ ನರ್ಸರಿ ಶಾಲಾ ಕಟ್ಟಡ ಸೋಮವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಮೂರು ವಾಹನಗಳು ಜಖಂ ಆಗಿದೆ.
ಹಳೆಯದಾದ ಕಟ್ಟಡದಲ್ಲಿ ನರ್ಸರಿ ಶಾಲೆ ನಡೆಯುತ್ತಿದ್ದು, ಬೆಳಗಿನ ಜಾವ ಕುಸಿದು ಬಿದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಒಂದು ವೇಳೆ ಶಾಲಾ ಸಮಯದಲ್ಲಿ ಕಟ್ಟಡ ಕುಸಿದಿದ್ದರೆ ಭಾರಿ ಸಾವು ನೋವು ಸಂಭವಿಸುತ್ತಿತ್ತು. ಕಟ್ಟಡದ ಅವಶೇಷಗಳಡಿ ಸಿಲುಕಿ ಕಾರು, ಗೂಡ್ಸ್ ಆಟೋ, ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯಲ್ಲಿ ಸುಮಾರು ೮೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು , ಹಳೆಯದಾದ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಭಾರತಿನಗರ ಠಾಣೆ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಡೆಸಿ, ಜೆಸಿಬಿ ಮೂಲಕ ಕಟ್ಟಡದ ಅವಶೇಷಗಳನ್ನು ತೆರವು ಗೊಳಿಸಿದ್ದಾರೆ. ಘಟನೆಯ ಸಂಬಂಧ ಇದುವರೆಗೂ ಯಾರೊಬ್ಬರು ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ನಿರ್ಲಕ್ಷ್ಯ?
ಸುಮಾರು ೫೦-೭೦ ವರ್ಷ ಹಳೆಯದಾದ ಬಿಬಿಎಂಪಿ ಶಾಲಾ ಕಟ್ಟಡ ಇದ್ದಾಗಿದ್ದು, ಸುಮಾರು ೭೦ ರಿಂದ ೮೦ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರೂ ಸಹ ಅದೇ ಕಟ್ಟಡದಲ್ಲಿ ಶಾಲೆ ಮುಂದುವರೆಸಲಾಗಿತ್ತು. ಒಂದೊಮ್ಮೆ ಶಾಲೆಯಲ್ಲಿ ಮಕ್ಕಳು ಇರುವಾಗ ಈ ರೀತಿಯ ಅವಘಡ ನಡೆದಿದ್ದರೆ ಭಾರೀ ಅನಾಹುತವೇ ನಡೆಯುತ್ತಿತ್ತು. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರು ಅದನ್ನು ಕೆಡವದೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.