1857ಕ್ಕೂ ಹಿಂದಿನ ಐತಿಹಾಸಿಕ ಮಿನಾರ್ ಕುಸಿತ; ASI, ವಕ್ಫ್ ಮಂಡಳಿ ವಿರುದ್ಧ ಆಕ್ರೋಶ! | Lucknow Minar Collapse

ಉತ್ತರ ಪ್ರದೇಶದ ಲಖನೌನಲ್ಲಿ 1857ರ ದಂಗೆಗೂ ಹಿಂದಿನ ಶಿಯಾ ಧಾರ್ಮಿಕ ಸಂಕೀರ್ಣದ ಮಿನಾರ್ ಕುಸಿದಿದೆ. ಈ ಘಟನೆ ಬೆನ್ನಲ್ಲೇ ಐತಿಹಾಸಿಕ ಕಟ್ಟಡದ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಎಎಸ್‌ಐ ಮತ್ತು ಶಿಯಾ ವಕ್ಫ್ ಮಂಡಳಿಯ ಕಾರ್ಯವೈಖರಿಯನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ.
Collapse of Karbala Dayanat-ud-Daula Minar
ಲಖನೌನ ಐತಿಹಾಸಿಕ ಶಿಯಾ ಧಾರ್ಮಿಕ ಸಂಕೀರ್ಣದ ಮಿನಾರ್ ಕುಸಿತ
Published on: 

Karbala Dayanat-ud-Daula Minar Collapse: ಉತ್ತರ ಪ್ರದೇಶದ ರಾಜಧಾನಿ ಲಖನೌನ ಹಳೆಯ ನಗರದ ಕಾಜ್‌ಮೈನ್ ಪ್ರದೇಶದಲ್ಲಿರುವ ಐತಿಹಾಸಿಕ ಶಿಯಾ ಧಾರ್ಮಿಕ ಸಂಕೀರ್ಣದ ಮಿನಾರ್ ಕುಸಿದಿದೆ. 1857ರ ದಂಗೆಗೂ ಹಿಂದಿನ ಈ ಕಟ್ಟಡವನ್ನು ಕರ್ಬಲಾ ದಯಾನತ್-ಉದ್-ದೌಲಾ ಎಂದು ಕರೆಯಲಾಗುತ್ತದೆ.

ಐತಿಹಾಸಿಕ ಕಟ್ಟಡದ ಮಿನಾರ್ ಕುಸಿದ ಬೆನ್ನಲ್ಲೇ ಎಎಸ್‌ಐ ಮತ್ತು ಶಿಯಾ ವಕ್ಫ್ ಮಂಡಳಿಯ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ. ಅದೃಷ್ಟವಶಾತ್, ಘಟನೆ ನಡೆದಾಗ ಅಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕಟ್ಟಡದ ಸಂರಕ್ಷಣೆಗೆ ಮೊದಲೇ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತೇ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ವಾಲಿದ್ದ ಮಿನಾರ್

ಸ್ಥಳೀಯರ ಪ್ರಕಾರ, ಮಿನಾರ್ ಹಲವು ವರ್ಷಗಳಿಂದ ಒಂದು ಬದಿಗೆ ವಾಲಿಕೊಂಡಿತ್ತು. ಕುಸಿಯುವ ಭೀತಿಯಿದ್ದರೂ ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡಿಲ್ಲ, ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಟ್ಟಡದ ಸ್ಥಿತಿ ಮೊದಲೇ ಹದಗೆಟ್ಟಿದ್ದರೂ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದರು ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಎಎಸ್‌ಐ ಅಧಿಕಾರಿಗಳ ವಿರುದ್ಧವೂ ಆರೋಪ

ಮಿನಾರ್ ಕುಸಿದ ಬೆನ್ನಲ್ಲೇ ಎಎಸ್‌ಐ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಫೋಟೋ ತೆಗೆದುಕೊಂಡಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಅಬ್ಬಾಸ್ ಹೈದರ್ ಆರೋಪಿಸಿದ್ದಾರೆ. ಖಾಸಗಿ ಮನೆಗಳ ವಿಚಾರದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವ ಇಲಾಖೆ, ಐತಿಹಾಸಿಕ ಸ್ಮಾರಕದ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದು ಅವರು ದೂರಿದ್ದಾರೆ.

ನಿರ್ವಹಣಾಧಿಕಾರಿ ವಿರುದ್ಧವೂ ಆರೋಪ

ಸಂಕೀರ್ಣದ ಮುತವಲ್ಲಿ (ನಿರ್ವಹಣಾಧಿಕಾರಿ) ಕಮ್ರುಲ್ ಹಸನ್ ಅವರ ಜವಾಬ್ದಾರಿ ಬಗ್ಗೆಯೂ ಸ್ಥಳೀಯ ನಿವಾಸಿ ಆಗಾ ಜಾಫರ್ ಪ್ರಶ್ನೆ ಎತ್ತಿದ್ದಾರೆ. ಮಿನಾರ್ ಶಿಥಿಲಾವಸ್ಥೆಯಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಆರೋಪ. ಮಿನಾರ್‌ನ ತಾಂತ್ರಿಕ ಪರಿಶೀಲನೆ ನಡೆಸಲಾಗಿತ್ತೇ, ತಜ್ಞರಿಂದ ಸುರಕ್ಷತಾ ಮೌಲ್ಯಮಾಪನ ಮಾಡಿಸಲಾಗಿತ್ತೇ ಮತ್ತು ಸ್ಥಳೀಯರ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.

ಶಿಯಾ ವಕ್ಫ್ ಮಂಡಳಿಯ ಹೊಣೆಗಾರಿಕೆ ಬಗ್ಗೆಯೂ ಪ್ರಶ್ನೆ

ಐತಿಹಾಸಿಕ ಮಿನಾರ್ ಕುಸಿದ ಬೆನ್ನಲ್ಲೇ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಮೇಲ್ವಿಚಾರಣೆ ಬಗ್ಗೆಯೂ ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ. ಧಾರ್ಮಿಕ ಮತ್ತು ಐತಿಹಾಸಿಕ ಕಟ್ಟಡಗಳ ನಿರ್ವಹಣೆಗೆ ಮಂಡಳಿ ಕೈಗೊಂಡ ಕ್ರಮಗಳೇನು ಎಂದು ಅಧ್ಯಕ್ಷ ಸೈಯದ್ ಅಲಿ ಜೈದಿ ಅವರನ್ನು ಪ್ರಶ್ನಿಸಿದ್ದಾರೆ. ಶಿಥಿಲ ಕಟ್ಟಡಗಳ ನಿಯಮಿತ ಪರಿಶೀಲನೆ ಮತ್ತು ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೆಲಸದ ಒತ್ತಡ ಹೇಳಿಕೊಂಡ ಏರ್ ಹೋಸ್ಟೆಸ್‌; ‘ಕ್ಯಾಪ್ಟನ್ ಕೂಲ್’ ಧೋನಿ ಕೊಟ್ಟ ಸಲಹೆ ಏನು? | MS Dhoni

ಲಖನೌನ ಐತಿಹಾಸಿಕ ಮಿನಾರ್ ಕುಸಿತ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಸ್ಥಳೀಯರ ಆರೋಪಗಳಿಗೆ ಸಂಬಂಧಪಟ್ಟ ಇಲಾಖೆಗಳ ಪ್ರತಿಕ್ರಿಯೆ ಲಭ್ಯವಾಗಿಲ್ಲ. ತನಿಖೆಯ ಬಳಿಕವೇ ಘಟನೆಯ ಕಾರಣ ಮತ್ತು ಹೊಣೆಗಾರಿಕೆ ಸ್ಪಷ್ಟವಾಗಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net