

ಕೂಡ್ಲಿಗಿ: ವಾಲ್ಮೀಕಿ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ಸಂಶೋಧನೆ ಪ್ರಕಾರ ಶೈಕ್ಷಣಿಕ ಹಾಗೂ ಆರೋಗ್ಯಕರ ವಿಷಯಗಳಲ್ಲಿ ತೀರ ಹಿಂದುಳಿದಿದ್ದು, ಜಾಗ್ರತೆ ವಹಿಸಬೇಕು ಎಂದರು.
ಕನ್ನಡ ವಿವಿ ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ್ ಯತಗಲ್ ಮಾತನಾಡಿ, ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ. ರಾಮಾಯಣದ ಮೂಲಕ ರಾಜಧರ್ಮ, ನೀತಿ ಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ವಾಲ್ಮೀಕಿ ಮಹರ್ಷಿಯು ಪ್ರಾತಃ ಸ್ಮರಣೀಯರಾಗಿದ್ದಾರೆ.
ವಾಲ್ಮೀಕಿಯು ಅಂದು ಕಂಡಿದ್ದ ಕಲ್ಯಾಣ ರಾಜ್ಯದ ಕಲ್ಪನೆ ಈಗಲೂ ಪ್ರಸ್ತುತವಾಗಿದೆ. ವಾಲ್ಮೀಕಿಯಂತಹ ದಾರ್ಶನಿಕರು, ಏಕಲವ್ಯ, ಮದಕರಿ ನಾಯಕ ರಂತಹ ವೀರಾಧಿವೀರರ ಪರಂಪರೆ ಹೊಂದಿರುವ ವಾಲ್ಮೀಕಿ ಸಮಾಜವು ಅವರ ಹಾದಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ವಾಲ್ಮೀಕಿ ದೇವಸ್ಥಾನದಲ್ಲಿ ಭಾವಚಿತ್ರ ಮೆರವಣಿಗೆಗೆ ಶಾಸಕ ಶ್ರೀನಿವಾಸ್ ಚಾಲನೆ ನೀಡಿದರು. ವಿವಿಧ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ವೇದಿಕೆಗೆ ಬರಲಾಯಿತು. ಬಳಿಕ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನ ಮಾಡಲಾಯಿತು.