

ಮುಂಬೈ: ಯಾವುದಾದರೂ ವಸ್ತು ಕಳವಾದರೆ, ಅದನ್ನು ಪತ್ತೆ ಮಾಡಿಸಿ ಪಡೆಯುವ ಪ್ರಯತ್ನ ನಿರಂತರವಾಗಿದ್ದರೆ ಕೆಲವೇ ದಿನಗಳಲ್ಲಿ ಸಿಕ್ಕಿಬಿಡುತ್ತದೆ. ಇಲ್ಲವೇ ಐದಾರು ತಿಂಗಳು, ಗರಿಷ್ಠ ಎಂದರೆ ಒಂದೆರಡು ವರ್ಷದಲ್ಲಿ ಪತ್ತೆಯಾಗಿ ಬಿಡಬಹುದು. ಅದಾಗ್ಯೂ ಸಿಗಲಿಲ್ಲ ಎಂದರೆ ಇನ್ನು ಅದು ಸಿಗುವುದು ಅನುಮಾನವೇ ಎಂದು ಕಳೆದುಕೊಂಡವರು ಅಥವಾ ಪತ್ತೆ ಮಾಡಬೇಕಾದವರು ಕೈಚೆಲ್ಲಿ ಬಿಡುವ ಸಾಧ್ಯತೆಯೇ ಹೆಚ್ಚು.
ಆದರೆ ಇಲ್ಲಿ ಅಂಥದ್ದೇ ಒಂದು ಪ್ರಕರಣದಲ್ಲಿ ಕಳವಾದ ವಸ್ತು ಕೊನೆಗೂ ಹಲವು ವರ್ಷಗಳ ಬಳಿಕ ಸಿಕ್ಕಿದ್ದು, ವಾರಸುದಾರರ ಕೈಗೆ ಸೇರಿದೆ. ಅಂದಹಾಗೆ ಕಳೆದುಹೋಗಿದ್ದು ಸಣ್ಣ ಮೊತ್ತದ ವಸ್ತುವಲ್ಲ, ಬದಲಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ. ಅದು ಸಿಕ್ಕಿದ್ದು ಬರೋಬ್ಬರಿ 24 ವರ್ಷಗಳ ಬಳಿಕ.
ಮಹಾರಾಷ್ಟ್ರದ ಕೊಲಾಬ ನಿವಾಸಿ ಅರ್ಜನ್ ದಾಸ್ವಾನಿ ಕುಟುಂಬಕ್ಕೆ ಕೊಲಾಬ ಪೊಲೀಸರು ಚಿನ್ನಾಭರಣಗಳನ್ನು ತಲುಪಿಸಿದ್ದಾರೆ. 1998ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಈ ಕುಟುಂಬದವರು ಕಳೆದುಕೊಂಡಿದ್ದ 2 ಪುರಾತನ ಚಿನ್ನದ ನಾಣ್ಯ, 3 ಬ್ರೇಸ್ಲೆಟ್ ಮತ್ತು 2 ಚಿನ್ನದ ಗಟ್ಟಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು, ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದು ಕೊಲಾಬ ಎಸಿಪಿ ಪಾಂಡುರಂಗ ಶಿಂಧೆ ಹೇಳಿದ್ದಾರೆ.
ಇನ್ನು ಈ ಪ್ರಕರಣ ಪತ್ತೆಯಾದ ಬಗೆ, ಕದ್ದ ಆರೋಪಿಗಳ ಕುರಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. -ಏಜೆನ್ಸೀಸ್