ರಿಮ್ಯಾಂಡ್ ಹೋಮ್, ಮಕ್ಕಳ ಪಾಲನಾ ಸಂಸ್ಥೆಗಳ ಗುತ್ತಿಗೆ ನೌಕರರಿಗೆ ಕೊಕ್

state govt remove cantrak employee
ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕುವಂತೆ ಸರ್ಕಾರದ ಆದೇಶ ಪ್ರತಿ.
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ಮಕ್ಕಳ ಪಾಲನೆ, ಪೋಷಣೆ ಮತ್ತು ಸುರಕ್ಷತೆ ದೃಷ್ಟಿಯಿಂದ ರಾಜ್ಯಾದ್ಯಂತ ಇರುವ ವೀಕ್ಷಣಾಲಯ (ರಿಮ್ಯಾಂಡ್ ಹೋಮ್), ಪ್ಲೇಸ್ ಆಫ್ ಸೇಫ್ಟಿ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಖಾಕಿ ಪಡೆಯನ್ನು ನಿಯೋಜಿಸಿ ಆದೇಶ ಹೊಡಿಸಿದ್ದು ರಾಜ್ಯ ಸರ್ಕಾರದ ಹೊಸ ಆದೇಶವು ಕಳೆದ 15 ವರ್ಷಗಳಿಂದ ಸರ್ಕಾರದ ಅಧೀನದ ಈ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೂರಾರು ನೌಕರರ ಬದುಕನ್ನು ಅತಂತ್ರಗೊಳಿಸಿದೆ.

ಹೊರಗುತ್ತಿಗೆ ಆಧಾರದ ಮೇಲೆ 19 ವೀಕ್ಷಣಾಲಯ ಮತ್ತು ಪ್ಲೇಸ್ ಆಫ್ ಸೇಫ್ಟಿ ಸಂಸ್ಥೆಯಲ್ಲಿ 79 ಹಾಗೂ 69 ಮಕ್ಕಳ ಪಾಲನಾ ಸಂಸ್ಥೆಯಲ್ಲಿದ್ದ 180 ಸಿಬ್ಬಂದಿ ಸೇವೆಯನ್ನು ಕೂಡಲೇ ಮುಕ್ತಾಯ ಅಥವಾ ಕೊನೆಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಲತಾ ಡಿ.28ರಂದೇ ಆದೇಶ ಹೊರಡಿಸಿದ್ದು 259 ಹೊರಗುತ್ತಿಗೆ ನೌಕರರ ಕೆಲಸಕ್ಕೆ ಕುತ್ತು ತಂದಿದೆ.
ಹೊರಗುತ್ತಿಗೆ ನೌಕರರಿಗೆ ಯಾವುದೇ ಮುನ್ಸೂಚನೆ ಮತ್ತು ಕಾಲಾವಕಾಶವನ್ನೂ ಕೊಡದೇ ತರಾತುರಿಯಲ್ಲಿ ಆದೇಶ ಹೊರಡಿಸಿದ್ದು ಕಳೆದ ಒಂದೂವರೆ ದಶಕದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 250ಕ್ಕೂ ಅಧಿಕ ನೌಕರರು ಮತ್ತು ಅವರ ಕುಟುಂಬವನ್ನು ಬೀದಿಗೆ ಬೀಳುವಂತೆ ಮಾಡಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿದ್ದ ಗುತ್ತಿಗೆ ನೌಕರರು ಮತ್ತು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ದೊಡ್ಡ ಶಾಕ್ ನೀಡಿದೆ.

ಕೋಲಾರದ ಘಟನೆ ಮುಳುವಾಯ್ತೆ?
2022ರ ಜುಲೈನಲ್ಲೇ ಬಾಲ ನ್ಯಾಯ ಭದ್ರತಾ ಪಡೆಯನ್ನೇ ಮಕ್ಕಳ ಪಾಲನಾ ಸಂಸ್ಥೆಗಳಿಗೆ ನಿಯೋಜಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಕೋಲಾರದ ಬಾಲ ಮಂದಿರದಲ್ಲಿ ಮಕ್ಕಳನ್ನು ಮಲಗುಂಡಿಗೆ ಇಳಿಸಿದ ಪ್ರಕರಣ ಇದೀಗ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ಭವಿಷ್ಯಕ್ಕೆ ಮುಳ್ಳಾಗಿದೆ. ಉಪ ಲೋಕಾಯುಕ್ತ ಫಣೀಂದ್ರ ಅವರು ಕೋಲಾರದ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿದ್ದಾಗ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಬಗ್ಗೆ ಅಭಿಪ್ರಾಯಪಟ್ಟಿದ್ದರು. ಆದಾದ ಬಳಿಕ ಈ ಎರಡು ಹೊಸ ಆದೇಶಗಳು 250ಕ್ಕೂ ಅಧಿಕ ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ. ಈ ಎರಡೂ ಆದೇಶಗಳು ಮಕ್ಕಳ ಸುರಕ್ಷತೆಗೆ ಒತ್ತು ನೀಡಿದ್ದರೂ ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದ ಗುತ್ತಿಗೆ ನೌಕರರಿಗೆ ಸಂಕಷ್ಟ ತಂಡೊಡ್ಡಿದೆ.

ಏನಿದು ಹೊಸ ಆದೇಶ?
ರಾಜ್ಯದಲ್ಲಿರುವ 19 ವೀಕ್ಷಣಾಲಯ ಮತ್ತು ಪ್ಲೇಸ್ ಆಫ್ ಸೇಫ್ಟಿ ಸಂಸ್ಥೆಗಳಲ್ಲಿ ಪ್ರತಿ ಸಂಸ್ಥೆಗೆ 4 ಪೊಲೀಸ್ ಸಿಬ್ಬಂದಿಯಂತೆ ಒಟ್ಟು 76 ಹುದ್ದೆ ಅಗತ್ಯವಿದ್ದು ಈ ಸಂಸ್ಥೆಗಳಲ್ಲಿ ಈಗಾಗಲೇ ಮಂಜೂರಾದ 47 ಹುದ್ದೆಗಳೊಂದಿಗೆ ಹೆಚ್ಚುವರಿ 29 ಭದ್ರತಾ ಸಿಬ್ಬಂದಿ ಹುದ್ದೆಗಳ ಸೃಜಿಸಲಾಗಿದೆ. ಈ 76 ಹುದ್ದೆಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜನೆ ಮೂಲಕ ಭರ್ತಿ ಮಾಡಬೇಕು. ಜತೆಗೆ ಈ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸೇವೆಯನ್ನು ಕೂಡಲೇ ಕೊನೆಗೊಳಿಸಬೇಕೆಂದು ಆದೇಶ ಹೊರಡಿಸಲಾಗಿದೆ.
ಮತ್ತೊಂದು ಆದೇಶದಲ್ಲಿ 69 ಮಕ್ಕಳ ಪಾಲನಾ ಸಂಸ್ಥೆಗಳಿಗೆ ಪ್ರತಿಸಂಸ್ಥೆಗೆ ಗೃಹರಕ್ಷಕರಂತೆ ಒಟ್ಟು 207 ಗೃಹರಕ್ಷಕ ಸಿಬ್ಬಂದಿ ಪಡೆಯಲು ಹುದ್ದೆಗಳು ಮಂಜೂರಾಗಿದೆ. ಭದ್ರತಾ ಸಿಬ್ಬಂದಿ ಸೇವೆಯನ್ನು ಗೃಹರಕ್ಷಕರಿಂದ ಪಡೆಯಲು ಸರ್ಕಾರ ಆದೇಶಿಸಿದೆ. ಬಾಲಕಿಯರ ಬಾಲ ಮಂದಿರಗಳಿಗೆ ಗೃಹರಕ್ಷಕಿಯನ್ನು ಮತ್ತು ಬಾಲಕರ ಬಾಲ ಮಂದಿರಗಳಿಗೆ ಗೃಹರಕ್ಷಕರನ್ನು ನಿಯೋಜಿಸುವಂತೆ ಆದೇಶಿಸಿದೆ. ಇದರಿಂದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಮೇಲಿರುವ 180 ಭದ್ರತಾ ಸಿಬ್ಬಂದಿ ಸೇವೆಯನ್ನು ಕೂಡಲೇ ಮುಕ್ತಾಯಗೊಳಿಸಬೇಕೆಂದು ಆದೇಶಿಸಿದೆ.

15 ವರ್ಷದಿಂದ ಮಕ್ಕಳ ಪಾಲನಾ ಸಂಸ್ಥೆ, ವೀಕ್ಷಣಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಇದೀಗ ಸರ್ಕಾರ ಈ ಹುದ್ದೆಗಳಿಗೆ ಪೊಲೀಸ್ ಬಲ ನಿಯೋಜಿಸಲು ಮುಂದಾಗಿದೆ. ಯಾವುದೇ ಮುನ್ಸೂಚನೆ ನೀಡದೇ ತಕ್ಷಣ ಜಾರಿಗೆ ಬರುವಂತೆ ಕೆಲಸದಿಂದ ತೆಗೆದುಹಾಕುವಂತೆ ಆದೇಶಿಸಿದೆ. 10-15 ವರ್ಷಗಳಿಂದ ಸಣ್ಣ ತಪ್ಪು ಮಾಡದೇ ಕೆಲಸ ಮಾಡಿಕೊಂಡು ಬರುತ್ತಿದ್ದು ಏಕಾಏಕಿ ಕೆಲಸಕ್ಕೆ ಬರಬೇಡಿ ಎಂದು ಸರ್ಕಾರ ಆದೇಶಿಸಿದೆ. ಇದರಿಂದ ನಮ್ಮ ಬದುಕು ಅತಂತ್ರವಾಗಿದೆ. ಶೀಘ್ರವೇ ರಾಜ್ಯಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.- ಮಹಮ್ಮದ್ ಫಯಾಜ್, ಹೊರಗುತ್ತಿಗೆ ನೌಕರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net