

ತುಮಕೂರು: ಕೊಬ್ಬರಿ ಬೆಲೆ ಇತಿಹಾಸ ಸೃಷ್ಟಿಸಿದ್ದು, ಇದೇ ಮೊದಲಬಾರಿಗೆ ತಿಪಟೂರು ಎಂಪಿಎಂಸಿಯಲ್ಲಿ ಕ್ವಿಂಟಾಲ್ಗೆ ದಾಖಲೆಯ 19500 ರೂ. ದೊರಕಿದೆ. ಶೀಘ್ರದಲ್ಲೇ ಬೆಲೆ 20 ಸಾವಿರ ರೂ. ಗಡಿ ದಾಟುವ ಸಾಧ್ಯತೆ ಇದೆ. ಸೋಮವಾರ ನಡೆದ ಇ ಟೆಂಡರ್ನಲ್ಲಿ ಕ್ವಿಂಟಾಲ್ ಕೊಬ್ಬರಿ ಮಾದರಿ ಬೆಲೆ 18500, ಕನಿಷ್ಠ ಬೆಲೆ 17,800ರೂ. ದಾಖಲಾಗಿದೆ.
ಸೋಮವಾರದ ಆನ್ಲೈನ್ ಟೆಂಡರ್ ಧಾರಣೆಯಲ್ಲಿ 410 ಲಾಟ್ಗಳ ಹರಾಜು ನಡೆಸಲಾಗಿದೆ. 8420 ಚೀಲದಲ್ಲಿ ಮಾರುಕಟ್ಟೆಗೆ ಬಂದಿದ್ದ 3,619 ಕ್ವಿಂಟಾಲ್ ಕೊಬ್ಬರಿಯ ಬಹುತೇಕ ಲಾಟ್ಗಳಿಗೆ 18,500 ರೂ. ಬೆಲೆ ಸಿಕ್ಕಿದೆ. ಈ ವರ್ಷದ ಮಾರ್ಚ್ನಲ್ಲಿ 16,006 ರೂ.ಗೆ ಮಾರಾಟವಾಗಿದ್ದ ಕ್ವಿಂಟಾಲ್ ಕೊಬ್ಬರಿ ಬೆಲೆ ಏ.3ರಂದು 19 ಸಾವಿರ ರೂ.ಗೆ ತಲುಪಿ ದಾಖಲೆ ನಿರ್ವಿುಸಿತ್ತು. ಆ ಬಳಿಕ 19 ಸಾವಿರ ರೂ. ಆಸುಪಾಸಿನಲ್ಲಿಯೇ ಇದ್ದ ಬೆಲೆ ಈಗ 19,500 ರೂ.ಗೆ ತಲುಪಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಕೊಬ್ಬರಿ ಎಣ್ಣೆ 15 ಕೆಜಿ ಡಬ್ಬ 3960 ರೂ.ಗೆ ಮಾರಾಟವಾಗುತ್ತಿದೆ. 31 ಸಾವಿರ ದಾಟಿದ ಟನ್ ‘ಚಿಪ್ಪು’: ಕೊಬ್ಬರಿ ಬೆಲೆ ಹೆಚ್ಚಳದ ಜತೆಗೆ ತೆಂಗಿನ ಚಿಪ್ಪು ಕೂಡ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ.
ಟನ್ಗೆ 31,000 ರೂ. ಕೊಟ್ಟು ಚಿಪ್ಪು ಕೊಂಡುಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತೆಂಗಿನಕಾಯಿಗೂ ಬೇಡಿಕೆ ಸೃಷ್ಟಿಯಾಗಿದ್ದು, ಆರೋಗ್ಯವಂತ ಹಣ್ಣುಗಾಯಿ 50 ರೂ. ವರೆಗೂ ಮಾರಾಟವಾಗುತ್ತಿದೆ. ಕಾಯಿಗೆ ಒಳ್ಳೆಯ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರು ತೆಂಗಿನಕಾಯಿ ಮಾರಾಟಕ್ಕೆ ಆಸಕ್ತಿ ತೋರಲಾರಂಭಿಸಿದ್ದಾರೆ.
ರಾಜ್ಯದಲ್ಲಿ ಅಡಕೆ ಬೆಳೆಯುವ ಪ್ರದೇಶ ಗಣನೀಯವಾಗಿ ಹೆಚ್ಚಾಗಿರುವ ನಡುವೆ ಕ್ವಿಂಟಾಲ್ ರಾಶಿ ಅಡಕೆ 60 ಸಾವಿರ ರೂ. ಗಡಿ ದಾಟಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ವರ್ಷ ಬರ ಮತ್ತು ಅತಿಯಾದ ಬಿಸಿಲಿನಿಂದ ಇಳುವರಿ ಕುಸಿತ ಕಂಡಿದ್ದು, ಬೇಡಿಕೆ ಹೆಚ್ಚಿರುವುದರಿಂದ ಬೆಲೆ ದಿಢೀರ್ ಏರಿಕೆಯಾಗಿದ್ದು ಮತ್ತಷ್ಟು ದರ ಏರಿಕೆ ಆಗುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಅಡಕೆ ಪ್ರದೇಶ ರಾಜ್ಯದಲ್ಲಿ 4.76 ಲಕ್ಷ ಹೆಕ್ಟೇರ್ಗೆ ಏರಿಕೆಯಾಗಿದೆ. ಬೆಲೆ ಮೇಲೆ ಋುಣಾತ್ಮಕ ಪರಿಣಾಮ ಬೀರುವ ಆತಂಕ ಕೊಂಚ ಕಡಿಮೆ ಆಗುವಂತಹ ಸುದ್ದಿ ಅಡಕೆ ಮಾರುಕಟ್ಟೆಯಿಂದ ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಅಡಕೆ ಬೆಲೆ ಸತತವಾಗಿ ಏರುತ್ತಿದ್ದು, ಕ್ವಿಂಟಾಲ್ ರಾಶಿ ಅಡಕೆ 60,589 ರೂ.ವರೆಗೆ ತಲುಪಿದೆ. ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸೋಮವಾರ ಸರಕು ಅಡಕೆಗೆ ಕ್ವಿಂಟಾಲ್ಗೆ 56109-91069 ರೂ., ರಾಶಿಗೆ 47889-60589 ರೂ., ಗೊರಬಲು 20009-32869 ರೂ. ಬೆಟ್ಟೆ ಅಡಕೆಗೆ 51009-58911 ರೂ. ಧಾರಣೆ ಬಂದಿದೆ.