

ಬೆಂಗಳೂರು: ಊಟಕ್ಕೆಂದು 4 ಸ್ಟಾರ್ ಹೋಟೆಲ್ಗೆ ತೆರಳಿದ್ದ ವಕೀಲೆಯೊಬ್ಬರು ತಮ್ಮ ಊಟದಲ್ಲಿ ಜಿರಳೆ ಇದ್ದದ್ದನ್ನು ಪತ್ತೆಹಚ್ಚಿದ್ದು, ಜಿರಳೆ ಇರುವ ಆಹಾರವನ್ನು ಬಡಿಸುತ್ತೀರಾ ಎಂದು ಹೋಟೆಲ್ ಸಿಬ್ಬಂದಿ ವಿರುದ್ಧ ಹರಿಹಾಯ್ದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಹೋಟೆಲ್ಗೆ ಭೇಟಿ ನೀಡಿದ್ದ ಗ್ರಾಹಕಿ ಶಿಲ್ಪಾ ದೀಪಕ್ ಎಂಬುವವರು ಪನ್ನೀರ್ ಡಿಶ್ ಆರ್ಡರ್ ಮಾಡಿದ್ದಾರೆ. ಈ ವೇಳೆ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು, ಇದನ್ನು ಕಂಡ ಶಿಲ್ಪಾ ಹೋಟೆಲ್ ಸಿಬ್ಬಂದಿ ವಿರುದ್ಧ ತೀವ್ರ ಕೆಂಡಾಮಂಡಲಗೊಂಡಿದ್ದಾರೆ. ಕೂಡಲೇ ಸಿಬ್ಬಂದಿಯೊಡನೆ ಜಗಳ ಮಾಡಿದ ಅವರು, ಹೋಟೆಲ್ನ ಅಡುಗೆ ಕೋಣೆಗೆ ತೆರಳಿ ಸ್ವಚ್ಛತೆ ಹೇಗಿದೆ ಎಂಬುದನ್ನು ವಿಡಿಯೋ ಮಾಡಲು ಮುಂದಾಗಿದ್ದಾರೆ.
ಅಡುಗೆಮನೆಗೆ ಏಕಾಏಕಿ ನುಗ್ಗಿದ ಮಹಿಳಾ ಗ್ರಾಹಕಿ ಅಲ್ಲಿನ ಶುಚಿತ್ವ ಹೇಗಿದೆ ಎಂಬುದನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದ್ದಾರೆ. ಆಕೆಯ ನಡೆಯನ್ನು ಖಂಡಿಸಿದ ಹೋಟೆಲ್ ಸಿಬ್ಬಂದಿ, ಮಹಿಳೆಯಿಂದ ಕ್ಯಾಮೆರಾ ಕಸಿಯಲು ಪ್ರಯತ್ನಿಸಿದ್ದು, ಆವರಣವನ್ನು ರೆಕಾರ್ಡ್ ಮಾಡದಂತೆ ಅಲ್ಲಿಂದ ಅವರನ್ನು ಎಳೆದೊಯ್ದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಕುರಿಂತೆ ಹತ್ತಿರದ ಪೊಲೀಸ್ ಠಾಣೆಗೆ ಹೋದ ಮಹಿಳೆ, ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲು: ವರದಿಗಳ ಪ್ರಕಾರ, ಮಹಿಳೆ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 352 (ಹಲ್ಲೆಗೆ ಶಿಕ್ಷೆ), 341 (ತಪ್ಪು ತಡೆಗೆ ಶಿಕ್ಷೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಮುಂದಾಗಿದ್ದಾರೆ,(ಏಜೆನ್ಸೀಸ್).