ಮುಳುಗುತ್ತಿದ್ದ ನೌಕೆಯಲ್ಲಿದ್ದ ಸಿಬ್ಬಂದಿ ರಕ್ಷಣೆ

coast
Published on

ಮಂಗಳೂರು: ಮಂಗಳೂರಿನಿಂದ ಲಕ್ಷದ್ವೀಪದ ಕಿಲ್ತನ್ ದ್ವೀಪಕ್ಕೆ ಆಹಾರವಸ್ತು ಹೇರಿಕೊಂಡು ಹೋಗುವಾಗ ಕಾಸರಗೋಡು ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ನೌಕೆಯಿಂದ ಎಲ್ಲ ಆರು ಸಿಬ್ಬಂದಿಯನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

ಶನಿವಾರ ಬೆಳಗ್ಗೆ 11.35ರ ವೇಳೆ ಕರಾವಳಿ ರಕ್ಷಣಾ ಪಡೆಯ ಡಾರ್ನಿಯರ್ ವಿಮಾನ ಗಸ್ತು ನಡೆಸುತ್ತಿರುವ ವೇಳೆ ನೆರವಿಗಾಗಿ ಕರೆ ಬಂದಿತ್ತು. ಕೂಡಲೇ ಶೋಧ ಕಾರ್ಯ ಆರಂಭಿಸಲಾಯಿತು. ಎಂಎಸ್‌ವಿ ಸಫೀನಾ ಅಲ್ ಮಿಜಾನ್ ಎನ್ನುವ ಬೋಟ್ ಮುಳುಗಿದ್ದು, ಅದರ ಅವಶೇಷ ಹಾಗೂ 6 ಸಿಬ್ಬಂದಿ ನೀರಿನಲ್ಲಿ ತೇಲುತ್ತಿರುವುದನ್ನು ಗುರುತಿಸಲಾಯಿತು. ತಕ್ಷಣವೇ ವಿಮಾನದಿಂದ ಜೀವರಕ್ಷಕಗಳನ್ನು ಕೆಳಕ್ಕೆ ಎಸೆಯಲಾಯಿತು. ಆ ಮೂಲಕ ಆ ಕಠಿಣ ಪರಿಸ್ಥಿತಿಯಲ್ಲಿ ಸಿಬ್ಬಂದಿ ಅದರಲ್ಲಿ ಉಳಿದುಕೊಳ್ಳುವುದು ಸಾಧ್ಯವಾಯಿತು.

ಡಾರ್ನಿಯರ್ ನೀಡಿದ ಮಾಹಿತಿ ಅನ್ವಯ ಕರಾವಳಿ ರಕ್ಷಣಾ ಪಡೆಯ ಸಿ-448 ನೌಕೆಯನ್ನು ರಕ್ಷಣಾ ಕಾರ್ಯಕ್ಕೆ ಕಳುಹಿಸಲಾಯಿತು. ಒಂದು ಗಂಟೆಯಲ್ಲಿ ಆ ಜಾಗಕ್ಕೆ ತಲುಪಿ ಆರೂ ಮಂದಿಯನ್ನು ರಕ್ಷಿಸಲಾಗಿದೆ.

ಬೋಟ್‌ನ ಇಂಜಿನ್ ಕೊಠಡಿಗೆ ನೀರು ನುಗ್ಗಿ ಈ ಅನಾಹುತ ಉಂಟಾಗಿತ್ತು. ಮಂಗಳೂರಿನಿಂದ ಶುಕ್ರವಾರ 120 ಟನ್‌ನಷ್ಟು ಆಹಾರಧಾನ್ಯ, ತರಕಾರಿ, ಗ್ರಾನೈಟ್, ಮರಳು ಇತ್ಯಾದಿ ಹೇರಿಕೊಂಡು ನೌಕೆ ಕಿಲ್ತನ್ ದ್ವೀಪಕ್ಕೆ ಹೊರಟಿರುವಾಗ ಘಟನೆ ನಡೆದಿದೆ. ಇದರಲ್ಲಿ ಗುಜರಾತ್‌ನ 5 ಹಾಗೂ ಮಂಗಳೂರಿನ ಒಬ್ಬರ ಸಹಿತ 6 ಸಿಬ್ಬಂದಿಯಿದ್ದರು. ಅವರನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಕರಾವಳಿ ಪೊಲೀಸ್‌ಗೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net