

ಬೆಂಗಳೂರು: ವೈದ್ಯರು, ಇಂಜಿನಿಯರ್ ಆಗಲು ಬಯಸುವ ಬಡ ಮಕ್ಕಳಿಗೆ ವೃತ್ತಿಪರ ವ್ಯಾಸಂಗ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿಯು ಮಹತ್ವದ ವೇದಿಕೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸೌಧದಲ್ಲಿ ಪ್ರಸಕ್ತ ವರ್ಷದ ಉಚಿತ ತರಬೇತಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ೋಷಿಸಿದ ಮಹತ್ವದ ಕಾರ್ಯಕ್ರಮ ಇದೀಗ ಪ್ರಾರಂಭವಾಗಿದ್ದು, ತರಬೇತಿ ನೀಡಲು ಪೇಸ್ ಸಂಸ್ಥೆಯೊಂದಿಗೆ ಈಗಾಗಲೇ ಒಪ್ಪಂದವಾಗಿದೆ ಎಂದರು.
ಸಮಾನ, ಉತ್ತಮ ಗುಣಮಟ್ಟ ಹಾಗೂ ಕೈಗೆಟುಕುವ ಶಿಕ್ಷಣ ನೀಡಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಶುಲ್ಕ ತೆತ್ತು ವೃತ್ತಿಪರ ವ್ಯಾಸಂಗದ ಪ್ರವೇಶ ಪರೀಕ್ಷೆ ತರಬೇತಿ ಪಡೆಯುತ್ತಾರೆ.
ಆದರೆ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಓದುವ ಬಡ ಮಕ್ಕಳ ಪಾಲಕರಿಗೆ ಈ ಶುಲ್ಕ ಭರಿಸುವುದು ಕಷ್ಟವಾಗಿ ಹಿಂಜರಿಯುತ್ತಾರೆ. ಇಲ್ಲವೇ ಮಕ್ಕಳಿಗೆ ತರಬೇತಿ ಕೊಡಿಸಲು ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನು ಮನಗಂಡು ಸಿಎಂ ಸಿದ್ದರಾಮಯ್ಯ ಅವರು, ಉಚಿತ ತರಬೇತಿಗೆ ವ್ಯವಸ್ಥೆ ಮಾಡಿದ್ದು, ಒಟ್ಟು 25 ಸಾವಿರ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಉಚಿತ ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದರು.
ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಪಿಯು ಕಾಲೇಜು, ಆದರ್ಶ ವಿದ್ಯಾಲಯದಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ನೀಟ್, ಜೆಇಇ, ಸಿಇಟಿ ಉಚಿತ ತರಬೇತಿ ವಿಸ್ತರಣೆಗೆ ಚಿಂತನೆಯಿದೆ ಎಂದರು.
ಬಡವರ ಮಕ್ಕಳು ವೈದ್ಯರು, ಇಂಜಿನಿಯರ್ ಆಗಬೇಕೆಂಬ ಕನಸು ನನಸಾಗಿಸಲು, ಪಾಲಕರಿಗೆ ತರಬೇತಿ ವೆಚ್ಚದ ಹೊರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.
ಟೆಸ್ಟ್‌ನಲ್ಲಿ ಆಯ್ಕೆಯಾದ ಪಿಯು ವಿಜ್ಞಾನ ಮೊದಲ, ಎರಡನೇ ವರ್ಷದ ತಲಾ 10 ಸಾವಿರ ಮತ್ತು ಆದರ್ಶ ವಿದ್ಯಾಲಯದ ಐದು ಸಾವಿರ ಸೇರಿ 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಈ ವರ್ಷ ನೀಡಲಾಗುತ್ತದೆ.
ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಲಾಗಿನ್ ಐಡಿ, ಪುಸ್ತಕಗಳನ್ನು ವಿತರಣೆ ಮಾಡಲಿದ್ದು, ಪ್ರತಿದಿನದ ತರಗತಿಗೆ ಮುನ್ನ, ನಂತರ ತಲಾ ಒಂದು ತಾಸು ಆನ್‌ಲೈನ್‌ನಲ್ಲೇ ನೀಟ್, ಜೆಇಇ, ಸಿಇಟಿ ತರಬೇತಿ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಲಾಗುವುದು.
ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಯೋಜನೆ ಪ್ರಕಟಿಸಿ 12.50 ಕೋಟಿ ರೂ. ಕಾದಿರಿಸಿದ್ದರು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಪೇಸ್ ಸಂಸ್ಥೆ ಏಳು ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಂಡಿದೆ. ಈ ವರ್ಷ, ಮುಂದಿನ ವರ್ಷದ ತರಬೇತಿಯನ್ನು ಇದೇ ಸಂಸ್ಥೆ ನಿರ್ವಹಿಸಲಿದೆ ಎಂಬ ಮಾಹಿತಿ ಹಂಚಿಕೊಂಡರು.
ತರಗತಿ ಕೊಠಡಿಯಲ್ಲಿ ಆನ್‌ಲೈನ್ ಮುಖೇನ ತರಬೇತಿ ನಡೆಯಲಿದ್ದು, ಆಯ್ಕೆಯಾಗದ ವಿದ್ಯಾರ್ಥಿಗಳಿಗೆ ಹಾಜರಾಗಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿತರಿಸಿದ ಪುಸ್ತಕಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶವಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಪೇಸ್ ಸಂಸ್ಥೆ ನಿರ್ದೇಶಕ ಪ್ರವೀಣ್ ತ್ಯಾಗಿ ಮಾತನಾಡಿ ಬಡ ಮಕ್ಕಳಿಗೆ ನೀಟ್, ಜೆಇಇ, ಸಿಇಟಿ ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿ ವ್ಯವಸ್ಥೆ ಮಾಡಿರುವುದು ಉತ್ತಮ ಉಪಕ್ರಮ, ಈ ಅವಕಾಶ ನಮ್ಮ ಸಂಸ್ಥೆಗೆ ಲಭಿಸಿರುವುದು ಸಂತಸ ತಂದಿದೆ ಎಂದರು.
ನುರಿತ ಅಧ್ಯಾಪಕ ವೃಂದವನ್ನು ತರಬೇತಿಗೆ ನಿಯೋಜಿಸಲಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಮೇಲ್ವಿಚಾರಣೆ ನಡೆಸಲಾಗುವುದು. ಬಡವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಆನ್‌ಲೈನ್, ನೇರ ಸಂವಾದದಲ್ಲಿ ಭಾಗವಹಿಸಿದ್ದ ಭರತ್, ದಾಮಿನಿ, ಅನುಪಮಾ, ಪವನ್ ಕುಮಾರ್,ಅಕ್ಷತಾ ಎಂ.ವಷಾ ಮುಂತಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.
ಪ್ರತಿಭೆಯಿದ್ದರೂ ಬಡತನದಿಂದ ನೀಟ್, ಜೆಇಇ, ಸಿಇಟಿಯಂತಹ ತರಬೇತಿ ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಮುತುವರ್ಜಿವಹಿಸಿ ಉಚಿತ ತರಬೇತಿ ಕೊಡಿಸುತ್ತಿರುವುದಕ್ಕೆ ಧನ್ಯವಾದ ಸಲ್ಲಿಸುವ ಜತೆಗೆ ಉಪಯುಕ್ತ ಅವಕಾಶವನ್ನು ಬಳಸಿಕೊಂಡು ಸಾಧಿಸಿ ತೋರಿಸುತ್ತೇವೆ ಎಂಬ ಸಂಕಲ್ಪ ಮಾಡಿದರು.
ರಾಜ್ಯದ ಸರ್ಕಾರಿ ಪಿಯು ಕಾಲೇಜಿನ ಎಲ್ಲ ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿಯ ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮೊರೆಯಿಟ್ಟರು.
ಆನ್‌ಲೈನ್ ಸಂವಾದದಲ್ಲಿ ರಾಜ್ಯದ 670 ಪಿಯು ವಿಜ್ಞಾನ ಕಾಲೇಜಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.