

ರಾಣೆಬೆನ್ನೂರ: ಶಿಕ್ಷಕರ ತಮ್ಮ ಪತ್ತಿನ ಸಹಕಾರ ಸೊಸೈಟಿಯ ಮೂಲಕ ಸರ್ಕಾರಿ ಶಾಲೆಗೆ ಅನುದಾನ ನೀಡಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಡಿಡಿಪಿಐ ಮೋಹನ ದಂಡಿನ ಹೇಳಿದರು.
ನಗರದ ಶಿಕ್ಷಕರ ಭವನದಲ್ಲಿ ಶಿಕ್ಷಕರ ಪತ್ತಿನ ಸಹಕಾರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ಕೆಲಸ ಸಮಾಜದಲ್ಲಿ ಪವಿತ್ರವಾದದ್ದು. ಅದನ್ನು ನಿಯತ್ತಿನ ಮೂಲಕ ಮಾಡಿದರೆ ದೇಶವನ್ನು ಹೊಸ ಸೃಷ್ಟಿ ಮಾಡಿದಂತೆ. ಭಾರತವನ್ನು ಮಾದರಿ ರಾಷ್ಟ್ರವನ್ನಾಗಿ ಮಾಡಲು ಶಿಕ್ಷಕರ ಕೆಲಸ ಬಹಳ ಪ್ರಮುಖವಾಗಿದ್ದು, ಅದನ್ನು ದೇವರ ಕೆಲಸ ಎಂದು ಭಾವಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಶಿಕ್ಷಕರು ತಮ್ಮ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ನೀಡಿ ಪ್ರತಿಭಾವಂತರಾಗಿ ಮಾಡಿದರೆ ಬಡವರು ಮಕ್ಕಳು ಯಾವಾಗ ಆಗಬೇಕು. ಇದನ್ನು ಶಿಕ್ಷಕರು ಅರಿತು ಅವರಿಗೂ ಸಹ ತಮ್ಮ ಮಕ್ಕಳಂತೆ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಿ ಪ್ರತಿಭಾವಂತರನ್ನಾಗಿ ಮಾಡಬೇಕು ಎಂದರು.
ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ ಸಮಾರಂಭ ಉದ್ಘಾಟಿಸಿದರು. ಮಂಗಳೂರಿನ ಅಲ್ ಹಿಕಾಮಿ ಡೈರಕ್ಟರ್ ಮಸ್ಟರ್ ಗ್ರುಪ್ ಆ್ ವಿದ್ಯಾಸಂಸ್ಥೆಯ ಮೌಲ್ವಿ ಮೌಲಾನ್ ಆಫೀಜಾ ಸುಪ್ಯಾನ್ ಸಕಾಪಿ ವಿಶೇಷ ಉಪನ್ಯಾಸ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ, ಸಂಘದ ಅಧ್ಯಕ್ಷ ಎಂ.ಸಿ. ಬಲ್ಲೂರು, ನೌಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಬಿ.ಪಿ. ಶಿಡೇನೂರ, ಶಿಕ್ಷಕರಾದ ಮಂಜನಾಯ್ಕ ಎಲ್., ಸಿ.ಎ. ಅಡಿವೇರ, ಹೇಮಂತ ಎಸ್.ಕೆ., ಎನ್.ಎಸ್. ರಾಮನಗೌಡ, ಅನಸೂಯಾ ರಾಠೋಡ, ಕೆ.ವಿ. ಕಾಟಣ್ಣನವರ ಮತ್ತಿತರರು ಉಪಸ್ಥಿತರಿದ್ದರು.