ಆರ್ಥಿಕ ಸಬಲತೆಗೆ ಸಹಕಾರ ಸಂಘಗಳು ವರದಾನ

bhageeratha
ಭಗೀರಥ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಗೀರಥ ಭಾವಚಿತ್ರಕ್ಕೆ ಎಸ್.ಎನ್.ಚನ್ನಬಸಪ್ಪ, ಆರ್.ಎಂ.ಮಂಜುನಾಥ ಗೌಡ, ಡಾ.ಧನಂಜಯ ಸರ್ಜಿ, ಶಾರದಾ ಪೂರ‌್ಯಾನಾಯ್ಕಾ ಮುಂತಾದವರು ಪುಷ್ಪಾರ್ಚನೆ ಮಾಡಿದರು.
Published on

ಶಿವಮೊಗ್ಗ: ಕೆಲವು ವಾಣಿಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಸಹಕಾರದ ಅನೇಕ ಇಲಾಖೆಗಳು ಕೆಲವು ಬ್ಯಾಂಕ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಿಲ್ಲ. ಏಕೆಂದರೆ ಅವುಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿ ಸಾಲ ನೀಡುವುದು ದೊಡ್ಡ ಬಂಡವಾಳಶಾಹಿಗಳಿಗೆ. ಆ ಬ್ಯಾಂಕ್‌ಗಳು ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಜನರ ಪರವಾಗಿರುವುದು ಸಹಕಾರ ಸಂಘಗಳು ಮಾತ್ರ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಶನಿವಾರ ಭಗೀರಥ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಷೇರು ಪತ್ರ ವಿತರಿಸಿ ಮಾತನಾಡಿದ ಅವರು, 119 ವರ್ಷದ ಹಿಂದೆ ಸಹಕಾರ ಕ್ಷೇತ್ರ ಆರಂಭವಾಯಿತು. ಬಡವರ ಮೇಲೆ ನಡೆಯುತ್ತಿದ್ದ ಆರ್ಥಿಕ ದೌರ್ಜನ್ಯ ತಪ್ಪಿಸಲು ಸಹಕಾರ ಸಂಘ ಪ್ರಾರಂಭವಾಯಿತು ಎಂದರು.
ಆರ್ಥಿಕ ಕುಸಿತಕ್ಕೆ ಒಳಗಾಗಿ ರಾಷ್ಟ್ರದ ಅನೇಕ ಬ್ಯಾಂಕ್‌ಗಳು ದಿವಾಳಿಯಾದವು. ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಇಂದಿಗೂ ಭದ್ರವಾಗಿದೆ. ದೇಶದ 60 ಕೋಟಿಗೂ ಹೆಚ್ಚು ಮಂದಿ ಸಹಕಾರ ವಲಯದ ವ್ಯಾಪ್ತಿಯಲ್ಲಿದ್ದಾರೆ. ಇವರೆಲ್ಲರೂ ಬಡ ಹಾಗೂ ಮಧ್ಯಮ ವರ್ಗದ ಜನರಾಗಿದ್ದಾರೆ. ಇವರೆಲ್ಲರೂ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡಿರುವುದರಿಂದ ದೇಶದ ಆರ್ಥಿಕ ವ್ಯವಸ್ಥೆಗೂ ಶಕ್ತಿ ಬಂದಿದೆ. ಆರ್ಥಿಕವಾಗಿ ಹಿಂದುಳಿದವರಿಗೆ, ರಾಷ್ಟ್ರೀಯ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ದೊರೆಯದವರಿಗೆ ಸಹಕಾರ ಸಂಘಗಳು ವರದಾನ. ಜನರನ್ನು ಸಹಕಾರ ಸಂಘದ ಮೂಲಕ ಆರ್ಥಿಕ ಸಬಲೀಕರಣ ಮಾಡಬೇಕು. ಭಗೀರಥ ಪ್ರಯತ್ನದ ಮೂಲಕ ಆರಂಭವಾಗಿರುವ ಈ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿರುವುದರಿಂದ ಹೆಚ್ಚು ಬಡ್ಡಿಗೆ ಸಾಲ ನೀಡುತ್ತಿದ್ದ ಅನೇಕ ಫೈನಾನ್ಸ್‌ಗಳು ಮುಚ್ಚಿ ಹೋಗಿವೆ. ರೈತರು, ಸಾಮಾನ್ಯ ಜನರಿಗೆ ಬ್ಯಾಂಕ್ ಆರ್ಥಿಕ ನೆರವು ನೀಡುತ್ತಿದೆ. ಸಹಕಾರ ಸಂಘವನ್ನು ಸ್ಥಾಪನೆ ಮಾಡುವುದು ಸುಲಭದ ಮಾತಲ್ಲ. ಷೇರು ಹಣ ಸಂಗ್ರಹಿಸುವುದು, ಸದಸ್ಯರನ್ನು ಸೇರಿಸಿಕೊಳ್ಳುವುದು, ಸಂಘಟನೆ ಮಾಡುವುದು ಕಷ್ಟದ ಕೆಲಸ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಭಗೀರಥ ಸಹಕಾರ ಸಂಘದ ಲಾಂಚನ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಭಗೀರಥ ಸಹಕಾರ ಸಂಘದ ಉಪಾಧ್ಯಕ್ಷ ವಸಂತ ಹೋಬಳಿದಾರ್, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಜಗನ್ನಾಥ ಸಾಗರ್ ಮುಂತಾದವರಿದ್ದರು.
50 ವರ್ಷದ ದಾಂಪತ್ಯ ಪೂರೈಸಿದ ದಂಪತಿಗಳನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net