

ಗಂಗಾಧರ್ ಬೈರಾಪಟ್ಟಣ ರಾಮನಗರ
ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ಕಳೆದ ಒಂದು ವರ್ಷಗಳಿಂದ ನಡೆಯುತ್ತಿದ್ದ ರಾಜಕೀಯ ಜಟಾಪಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬ್ರೇಕ್ ಹಾಕಿದ್ದು, ಕನಕಪುರ ಭಾಗದ ಜನತೆ ಕನಸು ನನಸಾಗುವ ದಿನಗಳು ಹತ್ತಿರವಾಗಿವೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಳ್ಳುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಪ್ರಭಾವ ಬಳಸಿದ ಸಚಿವ ಸುಧಾಕರ್ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದರು. ಈ ವಿಚಾರದಲ್ಲಿ ಸರ್ಕಾರ ತನ್ನ ನಡೆ ಸಮರ್ಥಿಸಿಕೊಂಡರೆ, ಡಿ.ಕೆ.ಶಿವಕುಮಾರ್ ಸಹೋದರರು ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಕೂಡಾ ಬರೆದಿದ್ದ ಡಿ.ಕೆ.ಶಿವಕುಮಾರ್ ಕನಕಪುರಕ್ಕೆ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದ್ದರು.
ಅಂತಿಮವಾಗಿ ಕಳೆದ ಒಂದೂವರೆ ವರ್ಷಗಳ ಹೋರಾಟಕ್ಕೆ ಸಿಎಂ ಬಿಎಸ್‌ವೈ, ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಕನಕಪುರಕ್ಕೆ ಕಾಲೇಜು ಕೊಡುವುದಾಗಿ ೋಷಣೆ ಮಾಡಿದ್ದಾರೆ ಸರ್ಕಾರದಲ್ಲೇ ಗೊಂದಲ ಇತ್ತು: ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಬಗ್ಗೆ ಸರ್ಕಾರದಲ್ಲೇ ಗೊಂದಲ ನಿರ್ಮಾಣವಾಗಿತ್ತು. ಈ ಸಂಬಂಧ ವಸತಿ ಸಚಿವ ಸೋಮಣ್ಣ ಒಂದು ಹೇಳಿಕೆ ನೀಡಿದ್ದರೆ ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಮತ್ತೊಂದು ಹೇಳಿಕೆ ನೀಡುವ ಮೂಲಕ ಗೊಂದಲಕ್ಕೆ ಕಾರಣವಾಗಿದ್ದರು.
ಡಿಕೆಶಿ ಸಹೋದರರ ಆಗ್ರಹದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ, ಇದಕ್ಕೆ ನೀಡಿದ್ದ ಜಮೀನನ್ನು ಹಿಂದಕ್ಕೆ ಪಡೆದಿಲ್ಲ ಎಂದು ಸಚಿವ ಸೋಮಣ್ಣ ಈ ಹಿಂದೆ ಹೇಳಿಕೆ ನೀಡಿದ್ದರೆ, ಮತ್ತೊಂದೆಡೆ ಜಿಲ್ಲಾ ಕೇಂದ್ರ ರಾಮನಗರ ಹೊರತು ಬೇರೆಲ್ಲೂ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದೇ ಇಲ್ಲ, ಇದರಲ್ಲಿ ಗೊಂದಲ ಬೇಡ ಎನ್ನುವ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೀಡಿದ್ದರು. ಆದರೆ ಇದೀಗ ಸೋಮಣ್ಣ ಹೇಳಿಕೆಯನ್ನೇ ಸಿಎಂ ಸಮರ್ಥಿಸಿದಂತಿದೆ.
ಗರಿಗೆದರಿದ ಕನಸು:
ಸಿಎಂ ಬಿಎಸ್‌ವೈ ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆ ಈ ಭಾಗದ ಜನರ ಕನಸನ್ನು ನನಸು ಮಾಡುವ ಆಸೆ ಹುಟ್ಟಿಹಾಕಿದೆ. ಕನಕಪುರ ಭಾಗದ ಜನತೆ ಮಾತ್ರವಲ್ಲದೆ, ಮೆಡಿಕಲ್ ಕಾಲೇಜು ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು, ಚಾಮರಾಜನಗರ ಜಿಲ್ಲೆಯ ಹಲವು ಭಾಗದ ಜನತೆ ಹೆಚ್ಚಿನ ಚಿಕಿತ್ಸೆಗೆ ಬೇಕೆಂದರೆ ಮಂಡ್ಯ, ಬೆಂಗಳೂರು, ಮೈಸೂರು ಆಸ್ಪತ್ರೆಗಳನ್ನೇ ಅವಲಂಬಿಸಬೇಕಿತ್ತು. ಆದರೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆರಂಭದಿಂದ ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ.
ಡಿಕೆಶಿ ಗೆಲುವು
ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವುದಾಗಿ ಮುಖ್ಯಮಂತ್ರಿ ೋಷಣೆ ಮಾಡಿರುವುದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಂದ ಗೆಲುವು ಎನ್ನುವ ಚರ್ಚೆಗಳು ಆರಂಭಗೊಂಡಿವೆ. ಯಡಿಯೂರಪ್ಪ ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮೈತ್ರಿ ಸರ್ಕಾರ ಪತನಗೊಂಡ ನಂತರ ಬಿಎಸ್‌ವೈ ಸರ್ಕಾರ ಶಾಕ್ ನೀಡಿತ್ತು. ಯೋಜನೆಗೆ ಜಾಗ ನಿಗದಿ, ಅನುದಾನ ಮಂಜೂರು ಮತ್ತು ಟೆಂಡರ್ ಪೂರ್ಣಗೊಂಡು ಕಾರ್ಯಾದೇಶ ನೀಡಿದ್ದರೂ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಶ್‌ಟಿ ಆಗಿತ್ತು. ಇದರ ವಿರುದ್ಧ ಗುಟುರು ಹಾಕಿದ್ದ ಡಿಕೆಶಿ ಕಾಲೇಜು ಮರಳಿ ಪಡೆಯುವುದಾಗಿ ಹೇಳಿದ್ದರು. ಅದರಂತೆ ಇದೀಗ ಕಾಲೇಜು ಕನಕಪುರಕ್ಕೆ ವಾಪಸಾಗಿದೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಕಾರ್ಯಾದೇಶದ ಹಂತಕ್ಕೆ ಬಂದಿದ್ದ ಮೆಡಿಕಲ್ ಕಾಲೇಜು ಕಾಮಗಾರಿಗೆ ತಡೆ ನೀಡಲಾಗಿತ್ತು. ಡಿ.ಕೆ.ಶಿವಕುಮಾರ್ ಮನವಿಗೆ ಸ್ಪಂದಿಸಿ, ತಡೆಯನ್ನು ತೆರವುಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಸ್.ರವಿ ವಿಧಾನ ಪರಿಷತ್ ಸದಸ್ಯ ----------------------------------