ಸಿಎಂ ಯಡಿಯೂರಪ್ಪ ದಾವೋಸ್ ಪ್ರವಾಸ ಫಲಪ್ರದ

davos jan 23 2020
Published on

ಬೆಂಗಳೂರು: ಕೃಷಿ ಆರ್ಥಿಕತೆ, ತಯಾರಿಕಾ ಕ್ಷೇತ್ರ, ಕೈಗಾರಿಕೆ, ತಂತ್ರಜ್ಞಾನ, ಔಷಧ, ಆಟೋಮೊಬೈಲ್ ಕೌಶಲ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯಮ ವೃದ್ಧಿಗೆ ದಿಗ್ಗಜ ಕಂಪನಿಗಳ ಆಸಕ್ತಿ ಹುಟ್ಟಿಸುವ ಮೂಲಕ ದಾವೋಸ್ ವಿಶ್ವ ಆರ್ಥಿಕ ಶೃಂಗವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫಲಪ್ರದಗೊಳಿಸಿದ್ದಾರೆ.

ಹೂಡಿಕೆ, ಉದ್ಯಮ ಸ್ನೇಹ ಕರ್ನಾಟಕವನ್ನು ಬಿಂಬಿಸಿದ ಸಿಎಂಗೆ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದ ಕೇಂದ್ರ ವಾಣಿಜ್ಯ, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸಾಥ್ ನೀಡಿದ್ದು ಗಮನಾರ್ಹ. ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಉದ್ದೇಶಿಸಿ ಮಾತನಾಡಿದ ಪಿಯೂಷ್ ಗೋಯಲ್, ಉದ್ಯಮವನ್ನು ಭಾರತದ ಎಲ್ಲ ಭಾಗಗಲ್ಲಿ ವಿಸ್ತರಿಸಿ, ವಿಶೇಷವಾಗಿ ಕೈಗಾರಿಕೆಗಳಿಗೆ ಪೂರಕ ವಾತಾವರಣವಿರುವ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಮೂಲಕ ಭಾರತದ ಆರ್ಥಿಕತೆ ವೃದ್ಧಿಗೆ ನೆರವಾಗಬೇಕು ಎಂದು ಉದ್ಯಮಿಗಳಿಗೆ ಮನವಿ ಮಾಡಿದರು.

ಹೊಸ ಕೈಗಾರಿಕಾ ನೀತಿ: ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಿಎಸ್​ವೈ, ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ವೃದ್ಧಿ ಮತ್ತು ಅಭಿವೃದ್ಧಿ ಶಕ್ತಿ ಕೇಂದ್ರವಾಗಿ ರೂಪಿಸಲು ಬದ್ಧ. 21ನೇ ಶತಮಾನದಲ್ಲಿ ನವಭಾರತ ನಿರ್ವಣಕ್ಕೆ ಪ್ರಧಾನಿ ಮೋದಿ ನಮ್ಮನ್ನು ಹುರಿದುಂಬಿಸುತ್ತಿದ್ದಾರೆ ಎಂದರು. ಉತ್ಪಾದಕತೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಹೊಸ ಕೈಗಾರಿಕೆ ನೀತಿ ರೂಪಿಸುತ್ತಿದ್ದೇವೆ. ಕೈಗಾರಿಕೆಗಳ ಆಶಾದಾಯಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದರು. ಭಾರತೀಯ ಮೂಲದ ಇನ್ಪೋಸಿಸ್, ಬಯೋಕಾನ್, ವಿಪ್ರೋ ಮತ್ತು ಡೈನಮ್ಯಾಟ್ರಿಕ್ಸ್​ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ರಾಜ್ಯ ನೆಲೆಯಾಗಿದೆ ಎಂದು ಇದೇ ಸಂದರ್ಭ ಉದ್ಯಮಿಗಳು, ಹೂಡಿಕೆದಾರರ ಗಮನವನ್ನು ಸಿಎಂ ಸೆಳೆದರು.

ನ.3ರಿಂದ ಜಾಗತಿಕ ಶೃಂಗ

‘ಆವಿಷ್ಕಾರ ಈಗ- ಅಭಿವೃದ್ಧಿ ನಿರಂತರ’ ಧ್ಯೇಯ ವಾಕ್ಯದಡಿ ಜಾಗತಿಕ ಹೂಡಿಕೆದಾರರ ಶೃಂಗ ಸಭೆ-2020 ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.3ರಿಂದ 5ರವರೆಗೆ ನಡೆಯಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ ಮುಖ್ಯಮಂತ್ರಿ ಬಿಎಸ್​ವೈ, ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು.

ಪ್ರಧಾನಿ ಕನಸು ಅನಾವರಣ

ದೇಶದ ಸಮಗ್ರ, ಸುಸ್ಥಿರ ಅಭಿವೃದ್ಧಿ ಹಾಗೂ ಕೌಶಲಪೂರ್ಣ ಮಾನವ ಸಂಪನ್ಮೂಲ ಅಣಿಗೊಳಿಸುವ ಆಶಯವನ್ನು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂವಾದದಲ್ಲಿ ಪ್ರತಿಪಾದಿಸಿ, ಪ್ರಧಾನಿ ಮೋದಿ ಅವರ ಭಾರತವನ್ನು 5 ಟ್ರಿಲಿಯನ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವ ಕನಸು ಬಿಚ್ಚಿಟ್ಟರು. ಈ ಕಾರ್ಯಕ್ರಮದಲ್ಲಿ ‘ದೇಶದ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರ’ ಕುರಿತು ಸಿಎಂ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net