ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲು ಧೈರ್ಯ ತೋರದ‌ ಸಿಎಂ: ವಿಜಯೇಂದ್ರ ವಾಗ್ದಾಳಿ

VIJAYENDRA - Copy
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ.ಗಳ ಅಕ್ರಮವಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಚಂದ್ರಶೇಖರನ್ ಡೆತ್ ನೋಟ್ ನಲ್ಲಿ ಇಲಾಖೆ ಸಚಿವರ ಮೌಖಿಕ ಸೂಚನೆ ಎಂದು ಉಲ್ಲೇಖಿಸಿದ್ದಾರೆ. ನಾವು ಪದೇ ಪದೆ ಒತ್ತಾಯಿಸಿದರೂ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯ ಧೈರ್ಯ ತೋರುತ್ತಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ರಾಜಭವನಚಲೋ ಚಳವಳಿಗೆ ಮುನ್ನ ವಿ್ಅನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಬೆರಳೆಣಿಕೆಯಷ್ಟು ಅಧಿಕಾರಿಗಳು ಸೇರಿಕೊಂಡು ಇಂತಹ ಅಕ್ರಮದ ದುಸಾಹಸಕ್ಕೆ ಕೈಹಾಕಲಾರರು. ಈ ಹಗರಣದಲ್ಲಿ ಪ್ರಭಾವಿಗಳ ಕೈವಾಡವಿದೆ. ಹಣಕಾಸು ಇಲಾಖೆ ಹೊಣೆ ಹೊತ್ತ ಸಿಎಂ ಸಿದ್ದರಾಮಯ್ಯ ತಕ್ಷಣ ಕ್ರಮವಹಿಸುವ ಬದಲು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದರು.

ತಾಂತ್ರಿಕ ನೆಪವೊಡ್ಡಬೇಡಿ

ಅಕ್ರಮ ಹಣ ವರ್ಗಾವಣೆ ಕುರಿತು ಯೂನಿಯನ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡಿದೆ. ರಾಜ್ಯ ಸರ್ಕಾರ ತಾಂತ್ರಿಕ ನೆಪವೊಡ್ಡದೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು .ದಲಿತರ ಹಣ ಲೂಟಿಯಾಗಿದ್ದು, ಸಚಿವ ನಾಗೇಂದ್ರ ರಾಜೀನಾಮೆ ಇಲ್ಲವೇ ವಜಾ, ಸಿಬಿಐ ತನಿಖೆಗೆ ಒಪ್ಪಿಸುವ ತನಕ ಬಿಜೆಪಿ ಹೋರಾಟ‌ ನಿಲ್ಲುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.

ಕಳೆದ ಒಂದು ವಾರದಿಂದ ಸಚಿವ ನಾಗೇಂದ್ರ ರಾಜೀನಾಮೆ ಸಿಎಂ ಪಡೆಯುತ್ತಾರೆ ಎಂಬ ಊಹಾಪೋಹವಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆ ಜಾಥಾ ಹೋರಾಟಕ್ಕೆ ಇಳಿದಿದ್ದೇವೆ.ರಾಜ್ಯಪಾಲರಿಗೆ ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ ಸಚಿವರ ವಜಾಕ್ಕೆ ಒತ್ತಾಯಿಸುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಗುಡುಗಿದರು.

ನಕಲಿ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ 94 ಕೋಟಿ ರೈ ವರ್ಗಾವಣೆಯಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ಅವ್ಯವಹಾರ ನಡೆದಿದೆ. ತೆಲಂಗಾಣ ಚುನಾವಣೆಗೆ ಬಹು ಕೋಟಿ ರೂ ಬಳಕೆಯಾಗಿರುವ ಗುಮಾನಿಯಿದೆ ಎಂದು ಬಿ.ವೈ.ವಿಜಯೇಂದ್ರ ಸಂಶಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net