

ಬೆಂಗಳೂರು: ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ (ಜಾತಿ ಜನಗಣತಿ) ಸಮೀಕ್ಷಾ ದತ್ತಾಂಶ ವಿಷಯವು ಶುಕ್ರವಾರ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಗೆ ಸೇರಿದೆ ಎಂದರೆ ಸಿಎಂ ಸಿದ್ದರಾಮಯ್ಯ ಮತ್ತೆ ಹಿಂದುಳಿದ ವರ್ಗಗಳ ಹೆಲ್ಮೆಟ್ ಧರಿಸಿದ್ದಾರೆ ಎಂದಾಯಿತು ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಮುಖ್ಯಮಂತ್ರಿ ಕುರ್ಚಿಗೆ ಅಪಾಯ, ತಮಗೆ ಸಮಸ್ಯೆ ಬಂದಾಗಲೆಲ್ಲ ಸಿದ್ದರಾಮಯ್ಯ ಹಿಂದುಳಿದ ವರ್ಗದ ಹೆಲ್ಮೆಟ್ ಧರಿಸಿ, ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಬಜೆಟ್ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದೆ ಎಂದು ನೆನಪಿಸಿದ್ದಾರೆ.
ಸಚಿವ ಸಂಪುಟ ಸಭೆಗೆ ಈ ವರದಿ ಬರುತ್ತಿದೆ ಎಂದರೆ ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ಅಪಾಯವಿದೆಯೆ ?. ಎರಡನೇ ಬಾರಿ ಸಿಎಂ ಆಗಿ ಎರಡು ವರ್ಷ ಕಳೆಯುತ್ತಿದ್ದರೂ ವರದಿ ಜಾರಿ ವಿಚಾರದಲ್ಲಿ ಜಪ್ಪಯ್ಯ ಎನ್ನದೇ ಕುಳಿತಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಮತ್ತೆ ಹಠಾತ್ ಆಗಿ ವರದಿ ಮಂಡನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕರ ದಿಲ್ಲಿ ಪ್ರವಾಸ, ರಾಹುಲ್ ಗಾಂಧಿ ಅಸಮಾಧಾನ ಇತ್ಯಾದಿ ವಿದ್ಯಮಾನಗಳ ಮಧ್ಯೆ ಸಂಪುಟದ ಅಜೆಂಡಾದಲ್ಲಿ ಜಾತಿ ಗಣತಿ ವಿಷಯ ಸೇರಿದೆ.
ಬಹುಶಃ ಸರ್ಕಾರದ ಕರಿಮಣಿ ಮಾಲೀಕತ್ವದ ಬದಲಾವಣೆ ಪ್ರಯತ್ನ ಜೋರಾಗಿರುವುದರ ಮುನ್ಸೂಚನೆಯೆ ಇದು ? ಎಂದು ವಿ.ಸುನಿಲ್‌ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.