

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲಿಯೇ ಆಗಮಿಸಲಿದ್ದಾರೆ.
ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ. ಆದರೆ ದಿನಾಂಕ ನಿಗದಿಯಾಗಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹಾಗೂ ಶಾಸಕ ಎಂ.ಆರ್ ಮಂಜುನಾಥ್ ಅವರು ಶನಿವಾರ ಅಧಿಕಾರಿಗಳೊಂದಿಗೆ ಮ.ಬೆಟ್ಟಕ್ಕೆ ತೆರಳಿ ಉದ್ಘಾಟನೆಯಾಗಬೇಕಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿ ಪಡೆದು ಚರ್ಚಿಸಿದರು. ಬಳಿಕ ನಾಗಮಲೆ ಭವನದಲ್ಲಿ ಅಗತ್ಯ ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಮುಖ್ಯಮಂತ್ರಿ ಅವರು ಸದ್ಯದಲ್ಲಿಯೇ ಮ.ಬೆಟ್ಟಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಕಾಲಾವಕಾಶ ಕಡಿಮೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಹೆಚ್ಚಿನ ಮುತುರ್ವಜಿ ವಹಿಸಿ ಉದ್ಘಾಟನೆ, ಶಂಕುಸ್ಥಾಪನೆ, ವೇದಿಕೆ ಕಾರ್ಯಕ್ರಮ ಹಾಗೂ ಗಣ್ಯರನ್ನು ಆಹ್ವಾನಿಸುವ ಬಗ್ಗೆ ರೂಪುರೇಷಗಳನ್ನು ತಯಾರಿಸುವುದರ ಮೂಲಕ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಉದ್ಘಾಟನೆಯಾಗಲಿರುವ ಕಾಮಗಾರಿಗಳು:
ಮ.ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ 512 ಕೊಠಡಿಗಳ ನಿರ್ಮಾಣ, 27.10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ, 46 ಲಕ್ಷ ರೂ. ವೆಚ್ಚದಲ್ಲಿ ಸಾಲೂರು ಬೃಹನ್ಮಠದಲ್ಲಿ ವೇದಾಗಮ ಪಾಠಶಾಲೆಯ ಗುರುಕುಲ ಕಟ್ಟಡ, 4.8 ಕೋಟಿ ರೂ. ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ, 8.51 ಕೋಟಿ ರೂ. ವೆಚ್ಚದಲ್ಲಿ ಒಂದು ಮೆಗಾ ವ್ಯಾಟ್ ಸೋಲಾರ್ ಪವರ್ ಪ್ಲಾಂಟ್ ಘಟಕ ಹಾಗೂ ದೀಪದಗಿರಿ ಒಡ್ಡುವಿನ ಶ್ರೀ ಮಹದೇಶ್ವರ ಸ್ವಾಮಿ ಪ್ರತಿಮೆಯ ತಳಭಾಗದಲ್ಲಿ ನಿರ್ಮಿಸಿರುವ ಮಹದೇಶ್ವರರ ಜೀವನ ಚರಿತ್ರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜತೆಗೆ ಮಹಾದ್ವಾರ, ಡಾರ್ಮಿಟರಿ ಹಾಗೂ ಇನ್ನಿತರ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಸಂಬಂಧ ಅಧಿಕಾರಿಗಳು ಅಗತ್ಯ ಸಿದ್ಧತೆಗೆ ಮುಂದಾಗಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ, ಎಸಿ ಬಿ.ಆರ್ ಮಹೇಶ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಡಿಸಿಎಫ್ ಡಾ. ಸಂತೋಷ್‌ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಡಿವೈಎಸ್ಪಿ ಧರ್ಮೇಂದ್ರ, ಪಿಡಬ್ಯುಡಿ ಎಇಇ ಚಿನ್ನಣ್ಣ ಹಾಗೂ ಇನ್ನಿತರರು ಇದ್ದರು.