

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಹವಣಿಕೆ, ಸಂಘ-ಪರಿವಾರದ ತಂತ್ರಗಾರಿಕೆಗೆ ‘ತಡೆಗೋಡೆ’ಯಂತೆ ನಿಂತು, ಸರ್ಕಾರದ ಕೆಲಸ ಜನರಿಗೆ ತಿಳಿಸಿ ಪಕ್ಷ ಪರವಾದ ವಾತಾವರಣ ನಿರ್ಮಿಸುವ ಟಾಸ್ಕ್‌ನ್ನು ವಿಧಾನ ಪರಿಷತ್‌ನ ಪಕ್ಷದ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ಕರೆದಿದ್ದ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಅನುದಾನ ಹಂಚಿಕೆ, ಕ್ಷೇತ್ರಗಳ ಅಭಿವೃದ್ಧಿ ನಂತರ ಧರ್ಮಸ್ಥಳ, ಮದ್ದೂರು, ಚಾಮುಂಡಿ ಚಲೋ ವಿಷಯಗಳು ಪ್ರಸ್ತಾಪವಾದವು ಎಂದು ಮೂಲಗಳು ತಿಳಿಸಿವೆ.
ಬಿಜೆಪಿಗೆ ಸಂಘಟನೆ ಬಲಪಡಿಸಲು ಧಾರ್ಮಿಕ ವಿಷಯಗಳು, ಭಾವನಾತ್ಮಕ ವಿಚಾರಗಳೇ ಬಂಡವಾಳವಾಗಿದ್ದು, ಸಂಘ- ಪರಿವಾರದವರು ಕಾರ್ಯಯೋಜನೆ ರೂಪಿಸುತ್ತಾರೆ. ಸಣ್ಣಪುಟ್ಟ ಘಟನೆಗಳನ್ನು ಪ್ರಚೋದನೆಗೆ ಅಸ ಮಾಡಿಕೊಂಡು ಗೊಂದಲ ಸೃಷ್ಟಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.
ಕರಾವಳಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಪರಿಸ್ಥಿತಿ ನಿಯಂತ್ರಿಸಿದ್ದೇವೆ. ಸರ್ಕಾರವನ್ನು ಹಿಂದು ವಿರೋಧಿ ಎಂದು ಬಿಂಬಿಸಿ, ಬೇರೆ ಪ್ರದೇಶದತ್ತ ಲಕ್ಷ್ಯವಹಿಸಿವೆ. ಕೊಪ್ಪಳ, ಸಾಗರ ಬಳಿಕ ಮದ್ದೂರು ಘಟನೆಗಳನ್ನು ಮುಂದೆ ಮಾಡಿ ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಹವಣಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳು ಅರ್ಹರ ಮನೆ ಬಾಗಿಲಿಗೆ ತಲುಪಿ ಜನರ ಜೀವನಮಟ್ಟ ಸುಧಾರಣೆಯಾಗುತ್ತಿದ್ದು, ಕೇಂದ್ರದ ಅಸಹಕಾರದ ಮಧ್ಯೆಯೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ. ವಾಸ್ತವಿಕ ಪರಿಸ್ಥಿತಿ ಮರೆಮಾಚುವುದಕ್ಕಾಗಿ ಅಪನಂಬಿಕೆ, ಅನುಮಾನ, ವಿಲವೆಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ವಸ್ತುಸ್ಥಿತಿಯನ್ನು ಹಿರಿಯರಾಗಿರುವ ವಿಧಾನ ಪರಿಷತ್ ಸದಸ್ಯರು ಅರ್ಥ ಮಾಡಿಕೊಂಡಿರುವ ವಿಶ್ವಾಸವಿದ್ದು, ನೈಜ ವಿಷಯವನ್ನು ಜನರಿಗೆ ತಿಳಿಸಿ ಬಿಜೆಪಿ ಬಣ್ಣ ಬಯಲು ಮಾಡಬೇಕು. ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ ಉತ್ತಮ ಅಭಿಪ್ರಾಯ ಮೂಡಿಸಲು ಶ್ರಮಿಸಬೇಕು ಎಂಬ ಸಲಹೆ ನೀಡಿದ್ದಾರೆ.
ವಿಧಾನಸಭೆ ಸದಸ್ಯರಿಗಿಂತ ವಿಧಾನ ಪರಿಷತ್ ಸದಸ್ಯರು ಜನರೊಂದಿಗೆ ನಿಕಟತೆ ಸಾಧಿಸಬೇಕು. ಹಿರಿಯರು, ಒಂದಲ್ಲ, ಒಂದು ವಿಷಯದಲ್ಲಿ ಪರಿಣತರಾಗಿರುವ ಕಾರಣ ಜನರ ಒಡನಾಟ ಸಲೀಸು. ಬಿಜೆಪಿಯ ಧೋರಣೆ, ಸರ್ಕಾರದ ಕ್ರಮಗಳೆರಡನ್ನೂ ತುಲನಾತ್ಮಕ ವಿವರಣೆ ಜನರ ಮುಂದಿಟ್ಟು, ಹಿಂದು ವಿರೋಧಿಯಲ್ಲ, ಮುಸ್ಲಿಮರ ಓಲೈಕೆಯೂ ಅಲ್ಲವೆಂದು ಸ್ಪಷ್ಟಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ತಿಳಿಸಿದರು ಎಂದು ಮೂಲಗಳು ವಿವರಿಸಿವೆ.