

ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿ ಧಾರವಾಡ ಎಎಸ್ ಪಿ ನಾರಾಯಣ ವಿ. ಭರಮನಿ ಅವರಿಗೆ ಹೊಡೆಯಲು ಕೈ ಎತ್ತಿದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಎಎಸ್ ಪಿ ನಾರಾಯಣ.ವಿ.ಭರಮನಿ ಸ್ವಯಂ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ವಿಆರ್‌ಎಸ್ ತೆಗೆದುಕೊಳ್ಳಲು ನಿರ್ಧರಿಸಿದ್ದ ಎನ್.ವಿ ಭರಮನಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ ವಾಪಸ್ ಪಡೆದು ಕೆಲಸ ಮುಂದುವರೆಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
"ನಾನು ಬೇಕು ಅಂತ ಮಾಡಿದ ಕೆಲಸವಲ್ಲ, ನಿನಗೆ ಅಗೌರವ ಇಲ್ಲವೇ ಅಪಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ, ಸರ್ಕಾರ ನಮ್ಮದೇ ಇದ್ದು ನಮ್ಮ ಪ್ರತಿಭಟನೆಯಲ್ಲಿ ಬಿಜೆಪಿ ಬಂದು ಅಡ್ಡಿಪಡಿಸದಕ್ಕೆ ಬೇಸರ ವ್ಯಕ್ತಪಡಿಸಿದ್ದೇನೆ" ರಾಜೀನಾಮೆ ನಿರ್ಧಾರ ವಾಪಸ್ ಪಡೆದು ಕೆಲಸ ಮುಂದುವರೆಸುವಂತೆ ಹೇಳಿರುವ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ,
ನಡೆದಿದ್ದೇನು?:
ನಿರಂತರ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಕೂಡ ಬಂದಿದ್ದರು. ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೂಡ ಪ್ರತಿಭಟನೆ ಮಾಡುತ್ತಿದ್ದರು.
ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮಾಡುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಎಂಟ್ರಿ ನೀಡಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಭಾಷಣದ ಮಧ್ಯೆ, ಧಾರವಾಡದ ಎಎಸ್ಪಿ ನಾರಾಯಣ ಭರಮನಿ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ. ವೇದಿಕೆಗೆ ಬಂದ ಅವರು, ಬಿಜೆಪಿ ಕಾರ್ಯಕರ್ತರು ವೇದಿಕೆಗೆ ನುಗ್ಗುತ್ತಿದ್ದಾರೆ ಎಂದು ಸಿಎಂಗೆ ಮಾಹಿತಿ ನೀಡುತ್ತಾರೆ. ಅದಕ್ಕೆ ಕೋಪಿಸಿಕೊಂಡ ಸಿದ್ದರಾಮಯ್ಯ, ವೇದಿಕೆಗೆ ಬರುವ ತನಕ ನೀವು ಏನು ಮಾಡುತ್ತಿದ್ದೀರಿ? ಅಂತಾ ಅಧಿಕಾರಿ ಮೇಲೆ ಕೈಎತ್ತಿದ್ದಾರೆ.
ಹೀಗೆ ಸಮವಸ್ತ್ರದಲ್ಲಿದ್ದ ನನಗೆ ಸಾರ್ವಜನಿಕವಾಗಿ ಅವಮಾನಿಸಿ ನನ್ನ ಮತ್ತು ನನ್ನ ಇಲಾಖೆಯ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸಿದ ಮಾನ್ಯ ಮುಖ್ಯ ಮಂತ್ರಿಗಳ ವರ್ತನೆಯನ್ನು ಇಡೀ ರಾಜ್ಯದಲ್ಲಿ ದೃಶ್ಯಮಾದ್ಯಮಗಳ ಮೂಲಕ ಭಿತ್ತರಿಸಲಾಗಿತ್ತು. ಘಟನೆಯಿಂದ ಮನಸ್ಸಿಗೆ ಆಘಾತವಾಗಿ. ಯಾರಲ್ಲಿ ಏನನ್ನೂ ಪ್ರಸ್ತಾಪಿಸದೆ ಮನೆಗೆ ಹೋದೆನು. ಮನೆಯಲ್ಲಿ ಸ್ಮಶಾನ ಮೌನ. ನನ್ನನ್ನು ನೋಡಿದ ಮಡದಿ ಮತ್ತು ಮಕ್ಕಳ ದುಃಖ ಕಟ್ಟೆಯೊಡೆದು ಬೋರ್ಗರೆಯಿತು. ಇಡೀ ದಿನ ಮೌನವೇ ಮಾತಾಯಿತು.
ಯಾರದೋ ತಪ್ಪಿಗೆ ನನ್ನನ್ನು ದಂಡಿಸಿದರಲ್ಲಾ ಎಂದು ಆ ಘಟನೆ ನನ್ನನ್ನು ಸದಾ ಕಾಡುತ್ತಿದೆ. ಒಂದು ರಾಜ್ಯದ ಮುಖ್ಯಮಂತ್ರಿ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿ . ಅವಮಾನಿಸಿ ಸಾಂತ್ಯಾನಿಸದೆ ಇದ್ದುದ್ದು ನನ್ನನ್ನು ವಿಚಲಿತಗೊಳಿಸಿದೆ. ನನ್ನಷ್ಟಕ್ಕೆ ನಾನು ನ್ಯಾಯ ಪಡೆದುಕೊಳ್ಳಲು ಆಗದವನು ಪರರಿಗೆ ನ್ಯಾಯ ಕೊಡಿಸಲಾದೀತೇ ? ಎಂಬ ಕೊರಗು ನನ್ನಲ್ಲಿ ಕಾಡತೊಡಗಿದೆ. ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಸ್ಥರಗಳಲ್ಲಿ ಶಿಸ್ತಿನ ಸಿಪಾಯಿಯಾಗಿ, ನೊಂದು ಬರುವ ಸಾರ್ವಜನಿಕರ ಅಹವಾಲುಗಳಿಗೆ ಅಂತಃಕರಣದಿಂದ ಸ್ಪಂದಿಸಿ ಅವರ ಗೌರವಕ್ಕೆ ಪಾತ್ರನಾಗಿ ಇಲಾಖೆಯಲ್ಲಿ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಿರುತ್ತೇನೆ. ಇಲಾಖೆ ಹಾಗೂ ಸಮಾಜದಲ್ಲಿ ಗೌರವ ಮಾನ ಸನ್ಮಾನ ನೀಡಿದ ಸಮವಸ್ತ್ರದೊಂದಿಗಿನ ಸಂಬಂಧ ನನ್ನ ಹೆತ್ತ ತಾಯಿಯೊಂದಿಗಿರುವಷ್ಟೇ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಸರ್ಕಾರವನ್ನು ಪ್ರತಿನಿಧಿಸುವ ಸರ್ಕಾರಿ ನೌಕರರಿಗೆ ಪ್ರತಿ ಹಂತದಲ್ಲೂ ಸವಾಲುಗಳ ಸಾಲೇ ಇರುತ್ತವೆ. ತನ್ನೆಲ್ಲಾ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಅವಮಾನಗಳನ್ನು ಸಹಿಸುತ್ತಾ, ಸರ್ಕಾರದ ಹಿತಾಸಕ್ತಿಗೆ ಟೊಂಕಕಟ್ಟಿ ನಿಂತು ಸೇವೆ ಸಲ್ಲಿಸುತ್ತಿರುವ ಎಲ್ಲಾ ಸರ್ಕಾರಿ ನೌಕರರಿಗೆ ಆತ್ಮಸ್ಥೆರ್ಯವನ್ನು ತುಂಬಬೇಕಾದ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ವರ್ತನೆಯಿಂದ ನನ್ನ ಮತ್ತು ರಾಜ್ಯದ ಇತರ ಸರ್ಕಾರಿ ನೌಕರರ ಆತ್ಮಸ್ಥೆರ್ಯ ಕುಂದಿಸಿರುತ್ತಾರೆ. ಈ ಘಟನೆಯಿಂದಾಗಿ ನಾನು ಮತ್ತು ನನ್ನ ಪರಿವಾರ ಇನ್ನಿಲ್ಲದಂತೆ ಮಾನಸಿಕವಾಗಿ ಕುಗ್ಗಿ. ಮನೊವೇದನೆಯಿಂದ, ಮನೋವ್ಯಾಕುಲತೆಗೆ ಒಳಗಾಗಿದ್ದೇವೆ. ಇದು ನನ್ನೊಬ್ಬನ ಅಳಲಲ್ಲಾ. ರಾಜ್ಯದ ಸಮವಸ್ತ್ರ ಧರಿಸುವ ಕೆಳಸ್ಥರದ ಅಧಿಕಾರಿ ಸಿಬ್ಬಂದಿಗಳಷ್ಟೇ ಅಲ್ಲ, ಸಮಸ್ತ ಸರ್ಕಾರಿ ನೌಕರರ ಅಳಲು.
ಸಾರ್ವಜನಿಕ ವೇದಿಕೆಯ ಮೇಲೆ ಮಾನ್ಯ ಮುಖ್ಯ ಮಂತ್ರಿಗಳ ವರ್ತನೆಯಿಂದ ನಾನು ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ, ಅವಮಾನಗೊಂಡ ನನಗೆ ಅನ್ಯ ಮಾರ್ಗವಿಲ್ಲದೇ ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದು ಮಾನ್ಯರು ಇದನ್ನು ಅಂಗೀಕರಿಸಬೇಕೆಂದು ವಿನಂತಿ ಮಾಡಿದ್ದಾರೆ.