

ಬೆಂಗಳೂರು: "ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ದೇಶಕ್ಕೆ ಮೊದಲು. ಬೇರೆ ಯಾವ ರಾಜ್ಯದಲ್ಲೂ ಈ ರೀತಿ ನಡೆದಿಲ್ಲ. ಉತ್ತರಪ್ರದೇಶ, ಗುಜರಾತ್, ಹರಿಯಾಣ, ಮಧ್ಯಪ್ರದೇಶದಲ್ಲಿ ಹೀಗೆ ನಡೆದಿದೆಯಾ, ಹೇಳಿ ನೋಡೋಣ?" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಿಎಂ, "ಬಿಜೆಪಿಯವರು ಸುಮ್ಮನೆ ಬುರುಡೆ ಬಿಡೋದು. ಅವರೆಲ್ಲಾ ಹರಿಕಥೆ ದಾಸರಲ್ಲ, ಬುರುಡೆ ದಾಸರು. ಈ ಯಡಿಯೂರಪ್ಪ 10 ಕೆಜಿಗೆ 1 ಕಾಳು ಕಡಿಮೆಯಾದರೂ ಹೋರಾಟ ಮಾಡುತ್ತೀನಿ ಎಂದು ಹೇಳುತ್ತಾರೆ. 7 ಕೆಜಿ ಅಕ್ಕಿಯನ್ನು 5 ಕಿಲೋಗೆ ಇಳಿಸಿದವರು ಇದೇ ಬಿ.ಎಸ್. ಯಡಿಯೂರಪ್ಪ. ಈಗ ಹೋರಾಟ ಮಾಡುತ್ತಾರಂತೆ, ಇವರು ಮಾಡುವುದಿಕ್ಕೆ ಆಗಲಿಲ್ಲ, ನಾವು ಜಾರಿಗೊಳಿಸಿದ್ದಕ್ಕೆ ಹೊಟ್ಟೆ ಕಿಚ್ಚಾಗಿದೆ" ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
"ಐದು ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದೇವೆ. ಪ್ರತಿದಿನ 50 ಲಕ್ಷ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಸುಮಾರು 22 ಕೋಟಿ ಮಹಿಳೆಯರು ಈ ಯೋಜನೆಯಿಂದ ಪ್ರಯಾಣ ಮಾಡಿದ್ದಾರೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್ನವರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಯಾರಿಗೂ ತೊಂದರೆಯಾಗುತ್ತಿಲ್ಲ, ಸುಮ್ಮನೆ ಇವರೇ ಹೇಳುತ್ತಿದ್ದಾರೆ" ಎಂದು ಹೇಳಿದರು.
"ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ನಮಗೆ ಪತ್ರ ಬರೆದಿದ್ದಾರೆ. ನಿಮ್ಮ ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದಾರೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.