ಮಹಿಳಾ ಮೀಸಲಾತಿ ಕಾಯ್ದೆ ಜಾರಿಯಾಗುವುದೇ ಅನುಮಾನ: ಸಿಎಂ ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ಮಹಿಳೆಯರಿಗೆ ಮೀಸಲಾತಿ ಕೊಡಬೇಕೆನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೆ ಡೀಲಿಮಿಟೇಷನ್​, ಜಾತಿ ಗಣತಿಯ ಕೊಕ್ಕೆ ಹಾಕಿ ಮಹಿಳಾ ಮೀಸಲಾತಿ ಕಾಯ್ದೆಗೆ ಆಯಸ್ಸು ನಿಗದಿ ಮಾಡುತ್ತಿರಲಿಲ್ಲ. ಇದೀಗ ಕೆಲ ಅಂಶಗಳನ್ನು ಗಮನಿಸಿದರೆ ಕಾಯ್ದೆ ಜಾರಿಯಾಗುವುದೇ ಅನುಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಮೀಸಲಾತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಗೆ ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ನಿಗದಿ ಪಡಿಸಿದೆ. ಅಲ್ಲದೆ ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್​ ಎನ್ನುವ ಎರಡು ಕೊಕ್ಕೆ ಹಾಕಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರುತ್ತದೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಗೆ ಜಾರಿಯಾಗುವ ಮೊದಲೇ ಆಯಸ್ಸು ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ವಂಚನೆ. ಹೀಗಾಗಿ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಹೋರಾಟ ಮುಂದುವರೆಸಬೇಕು ಎಂದು ಹೇಳಿದರು.

ಮಹಿಳಾ ಮೀಸಲಾತಿ ಬಿಲ್​ ಸಿದ್ದಪಡಿಸಿದ್ದು ಕಾಂಗ್ರೆಸ್​. ಕಾಂಗ್ರೆಸ್​ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ ಶೇ. 33 ಮಾತ್ರವಲ್ಲ, ಶೇ. 50 ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹಿರಿಯ ನ್ಯಾಯವಾದಿ ಪೊ.ರವಿವರ್ಮ ಕುಮಾರ್​ ಮಾತನಾಡಿ, ಕೇಂದ್ರ ಸರ್ಕಾರ ನಿರ್ಧರಿಸಿದ ದಿನದಿಂದ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬರುತ್ತದೆ. ಇದೀಗ ಯಾರಿಗೂ ತಿಳಿಸದೆ ತರಾತುರಿಯಲ್ಲಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಜನಗಣತಿಯ ಆಧಾರದ ಮೇಲೆ ಈ ಕಾಯ್ದೆ ಅನುಷ್ಠಾನಗೊಳ್ಳುತ್ತದೆ. ಆದರೆ ಜನಗಣತಿ ನಡೆಯದೆ ಪ್ರಸ್ತುತ ದೇಶದಲ್ಲಿ ರಾಜ್ಯಭಾರ ನಡೆಯುತ್ತಿದೆ ಎಂದು ಹೇಳಿದರು.

ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್​, ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್​, ನ್ಯಾಯವಾದಿ ಎನ್​.ಅನಂತ ನಾಯಕ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net