ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ | Soldiers

ವಿಜಯವಾಣಿ - 2024-12-26T120447.161
Published on

ಬೆಳಗಾವಿ: ಗಡಿ ರಕ್ಷಣೆಗೆ ತೆರಳುತ್ತಿದ್ದ ರಾಜ್ಯದ ನಾಲ್ವರು ಯೋಧರು (Soldiers) ಪ್ರತ್ಯೇಕ ಅಪಘಾತಗಳಲ್ಲಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಪೂಂಛ್​ನಲ್ಲಿ ಮಂಗಳವಾರ (ಡಿ.24) ಸೇನಾ ವಾಹನ ಕಮರಿಗೆ ಉರುಳಿಬಿದ್ದ ಹಿನ್ನಲೆ ಅಪಘಾತದಲ್ಲಿ ಐವರು ಸೈನಿಕರು ಕೊನೆಯುಸಿರೆಳೆದರು. ಇವರಲ್ಲಿ ಮೂವರು ಕರ್ನಾಟಕದವರಾಗಿದ್ದು. ಇನ್ನೊಂದೆಡೆ ಮಣಿಪುರದ ಬಂಬಲಾದಲ್ಲಿ ಸಂಭವಿಸಿದ ಅವಘಡದಲ್ಲಿ ರಾಜ್ಯದ ಮತ್ತೋರ್ವ ಯೋಧ ಪ್ರಾಣಾರ್ಪಣೆ ಮಾಡಿದ್ದಾರೆ. ಒಟ್ಟು ರಾಜ್ಯದ ನಾಲ್ವರು ಯೋಧರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ್ಯು ಹೊಂದಿದ ಸೈನಿಕರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಧೈರ್ಯ ತುಂಬಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊನೆಯುಸಿರೆಳೆದ ಹುತಾತ್ಮ ಸೈನಿಕರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ಗೌರವ ಸಲ್ಲಿಸಿದರು. ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ಗೌರವ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಿಎಂ, "ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ದುಃಖಕರ ಸಂಗತಿ. ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ" ಎಂದರು.

"ಸರಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನು ಒದಗಿಸಲಾಗುವುದು. ಅಪಘಾತದಲ್ಲಿ ನಮ್ಮ ಯೋಧರಾದ ದಯಾನಂದ ತಿರುಕಣ್ಣನವರ್ ಬೆಳಗಾವಿ, ಧನರಾಜ್ ಸುಭಾಷ್ ಚಿಕ್ಕೋಡಿ, ಮಹೇಶ್ ನಾಗಪ್ಪ ಬಾಗಲಕೋಟೆ ಮತ್ತು ಅನೂಪ್ ಪೂಜಾರಿ ಕುಂದಾಪುರ ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ" ಎಂದು ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net