ಪ್ರಧಾನಿ ಭೇಟಿಯಾದ ಸಿಎಂ ಸಿದ್ದರಾಮಯ್ಯ.. PM ಮುಂದೆ ಇಟ್ಟ ಪ್ರಮುಖ ಬೇಡಿಕೆಗಳೇನು?

PM
Published on

ದೆಹಲಿ: ಸಿಎಂ ಸಿದ್ದರಾಮಯ್ಯ ಇಂದು(ನ.29) ಪ್ರಧಾನಮಂತ್ರಿ ನರೇಂದ್ರ ಮೋದಿ(PM) ಅವರನ್ನು ಭೇಟಿಯಾದರು.ಬಳಿಕ ಉಭಯ ನಾಯಕರು ಕುಶಲೋಪರಿ ವಿಚಾರಸಿದರು. ಇದೇ ವೇಳಿ ಸಿಎಂ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಸಿ, ರಾಜ್ಯಕ್ಕೆ ಬೇಕಾದ ಅನುದಾನ ಒದಗಿಸುವಂತೆ ಮನವಿಪತ್ರ ಸಲ್ಲಿಸಿದರು.

PM ಮುಂದೆ ಇಟ್ಟ ಪ್ರಮುಖ ಬೇಡಿಕೆಗಳೇನು?

1.ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರಾಜ್ಯದ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಿದೆ. 2023-24ರ ಸಾಲಿನಲ್ಲಿ ರೂ.5600 ಕೋಟಿಗಳನ್ನು ಮಂಜೂರು ಮಾಡಲಾಗಿತ್ತು. 2024 -25ರ ಸಾಲಿನಲ್ಲಿ ರೂ. 2,340 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ ನಬಾರ್ಡ್ ನೆರವು ಪ್ರಸಕ್ತ ಸಾಲಿನಲ್ಲಿ ಶೇ.58 ರಷ್ಟು ಕಡಿತವಾಗಿದೆ. ರಾಜ್ಯವು ಹೆಚ್ಚುವರಿ ಬಡ್ಡಿ ಸಹಾಯಧನವನ್ನು ನೀಡದ ಹೊರತು, ಇದು ರಾಜ್ಯದ ರೈತಾಪಿ ವರ್ಗದ ಆರ್ಥಿಕ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಆದ್ದರಿಂದ ಈ ಕೂಡಲೇ ಇದನ್ನು ಪರಾಮರ್ಶಿಸಿ ನಬಾರ್ಡ್ ನೆರವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.ಚರಾಜ್ಯದ ರೈತರು ಅಲ್ಪಾವಧಿ ಬೆಳೆ ಸಾಲಗಳನ್ನು ಪಡೆಯಲು ಯಾವುದೇ ರೀತಿಯ ತೊಂದರೆಯಾಗದಂತೆ ತಾವು ಹಣಕಾಸು ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುತ್ತಿದ್ದೇನೆ.

2.ಈ ಮೊದಲೇ ತಮ್ಮಲ್ಲಿ ಮನವಿ ಮಾಡಿರುವಂತೆ, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 2023-24 ರ ಕೇಂದ್ರ ಬಜೆಟ್ ನಲ್ಲಿ ಅನುಮೋದನೆಯಾಗಿರುವ ರೂ. 5,300 ಕೋಟಿ ಅನುದಾನ ಬಿಡುಗಡೆ ಮಾಡುವ ಕೇಂದ್ರ ಹಣಕಾಸು ಸಚಿವರ ಭರವಸೆ ಈವರೆಗೆ ಈಡೇರಿಲ್ಲ. ತ್ವರಿತ ನೀರಾವರಿ ಲಾಭ ಕಾರ್ಯಕ್ರಮದಡಿ ನೆರವು ಒದಗಿಸಲು ಸಚಿವ ಸಂಪುಟದ ಟಿಪ್ಪಣಿಯನ್ನು ಸಿದ್ದಮಾಡಿರುವ ಬಗ್ಗೆ ತಿಳಿದುಬಂದಿದೆ.ಪ್ರಸಕ್ತ ಯೋಜನೆ ಶೀಘ್ರ ಅನುಮೋದನೆಗೊಂಡಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ಮಧ್ಯ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡಲು ತಮ್ಮಲ್ಲಿ ಮನವಿ ಮಾಡುತ್ತೇನೆ.

3.ಶುಷ್ಕ ವಲಯಕ್ಕೆ ಸೇರಿದ ಕರ್ನಾಟಕದಂತಹ ರಾಜ್ಯದಲ್ಲಿ ನೀರಾವರಿ ಸೌಲಭ್ಯ ಸಾಮರ್ಥ್ಯಗಳನ್ನು ಸಬಲಗೊಳಿಸುವುದು ಅತ್ಯಗತ್ಯವಾಗಿದೆ. ಈ ಕಾರ್ಯವನ್ನು ಬಹುತೇಕ ರಾಜ್ಯವು ತನ್ನ ಸಂಪನ್ಮೂಲಗಳಿಂದಲೇ ಭರಿಸುತ್ತಿದೆ. ಆದರೆ, ಜಲ ಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳಲ್ಲಿ ಯೋಜನೆಗಳ ತೀರುವಳಿ ಬಾಕಿ ಇರುವುದು ನಮ್ಮ ಯೋಜನೆಗಳನ್ನು ವಿಳಂಬ ಮಾಡಿದೆ. ಕಾವೇರಿ ನದಿ ಪಾತ್ರದ ಮೇಕೇದಾಟು ಯೋಜನೆ ಹಾಗೂ ಮಹದಾಯಿ ನದಿಯ ಕಳಸಾಬಂಡೂರಿ ಯೋಜನೆಗಳಗತ್ತ ತಾವು ತುರ್ತು ಗಮನ ಹರಿಸಬೇಕಿದೆ ಜಲಶಕ್ತಿ ಹಾಗೂ ಅರಣ್ಯ, ಪರಿಸರ ಸಚಿವಾಲಯಗಳಿಂದ ಶೀಘ್ರ ತೀರುವಳಿ ದೊರಕಿಸಿಕೊಡಲು ಕೋರಲಾಗಿದೆ.

4.ಕರ್ನಾಟಕ ಅತ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯವಾಗಿದ್ದು, 13 ಮಹಾನಗರ ಪಾಲಿಕೆಗಳಿದ್ದು, ಈ ಎರಡನೇ ಸ್ತರದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಅಗತ್ಯವಿದೆ. ಕರ್ನಾಟಕ ಸರ್ಕಾರ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಮುಂದಿನ ಮೂರು ವರ್ಷಗಳ ಅವಧಿಗೆ 2ಸಾವಿರ ಕೋಟಿ ರೂ. ಈ ಉದ್ದೇಶಕ್ಕಾಗಿ ತೆಗೆದಿರಿಸಿದೆ. ಆದರೆ ಈ ನಗರಗಳಿಗೆ ಸಮಗ್ರ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ಅಮೃತ್ ಅಥವಾ ಇನ್ನಾವುದೇ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 10ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಲು ನಾನು ಕೋರುತ್ತೇನೆ ಎಂದಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net