ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣ: ಗೃಹ ಸಚಿವರ ಜತೆ ಚರ್ಚಿಸಿದ ಬಳಿಕ CID ತನಿಖೆಗೆ ಸಿಎಂ ಸೂಚನೆ

Siddaramaiah CID
Published on

ಬೆಂಗಳೂರು: ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಗೃಹ ಸಚಿವರು ಸೇರಿದಂತೆ ಸಚಿವರುಗಳು ಜತೆ ಚರ್ಚೆ ನಡೆಸಿದ ಬಳಿಕ ಪ್ರಕರಣವನ್ನು CID ತನಿಖೆಗೆ ಒಪ್ಪಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣದ ಹಿಂದೆ ಯಾರದ್ದೋ ಕೈವಾಡ ಇದೆ. ಸಕ್ತ ತನಿಖೆ ನಡೆಸುವಂತೆ ಕೋರಿ ಕೃಷಿ ಸಚಿವ ಚಲುವರಾಯಸ್ವಾಮಿ ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಚಲುವರಾಯಸ್ವಾಮಿ ಬರೆದ ಪತ್ರದಲ್ಲಿ ಏನಿದೆ?

ಕಳೆದ ಎರಡು ತಿಂಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದೊಂದಿಗೆ ಆಯ್ಕೆಯಾದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತಾಶರಾಗಿರುವ ಕೆಲವು ರಾಜಕೀಯ ವಿರೋಧಿಗಳು ಮತ್ತು ಕಿಡಿಗೇಡಿಗಳು ಸರ್ಕಾರ ಅಸ್ತಿತ್ವಕ್ಕೆ ಬಂದು ನಾನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಷಡ್ಯಂತ್ರ ರೂಪಿಸಿ, ಇಲ್ಲಸಲ್ಲದ ಆರೋಪಗಳನ್ನು ನಮ್ಮ ಮೇಲೆ ಹೊರಿಸಿ ಸರ್ಕಾರಕ್ಕೆ, ಮತ್ತು ನನ್ನ ಮೇಲೆ ಕಳಂಕ ಹಚ್ಚುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಅನುಷ್ಠಾನದಿಂದ ಹತಾಶರಾಗಿರುವ ಕೆಲವು ನಿರುದ್ಯೋಗಿ ರಾಜಕಾರಣಿಗಳು, ಸಮಾಜಕ್ಕೆ ಮಾರಕವಾಗಿರುವ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿ ಇಲಾಖೆಯ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಸತ್ಯಕ್ಕೆ ದೂರವಾದ ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸಿ ನಕಲಿ ಪತ್ರಗಳನ್ನು ರಾಜ್ಯಪಾಲರು ಹಾಗೂ ಇನ್ನಿತರ ಸಾಂವಿಧಾನಿಕ ಸಂಸ್ಥೆಗಳಿಗೆ ಸಲ್ಲಿಸಿ ಕುಚೋದ್ಯದ ನಡವಳಿಕೆ ಪ್ರದರ್ಶಿಸುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನಪರವಾಗಿ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟ ಸಾಧ್ಯವಾಗಲಿದೆ. ಯಾವುದೇ ಆಧಾರಗಳಿಲ್ಲದ, ದಾಖಲಾತಿಗಳಿಲ್ಲದ ಆರೋಪಗಳನ್ನು ಸಾರ್ವಜನಿಕವಾಗಿ ಮಾಡುತ್ತಾ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಮಾಧ್ಯಮಗಳ ಮೂಲಕ ನಮ್ಮ ಮೇಲೆ ಕಳಂಕ ಹಚ್ಚಲು ಪುಯತ್ನಿಸುತ್ತಿರುವುದು ಶೋಚನೀಯವಾಗಿದ್ದು, ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ತಾವು ಈ ಕೂಡಲೇ ಮಾನ್ಯ ಗೃಹ ಸಚಿವರು ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ನನ್ನ ಮೇಲೆ ಮತ್ತು ಸರ್ಕಾರದ ಮೇಲೆ ಷಡ್ಯಾಂತ್ರ ರೂಪಿಸಿ ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಬಳಸಿ ಸುಳ್ಳು ಆರೋಪಗಳನ್ನು ಸೃಷ್ಠಿಸಿ ಮಾನ, ರಾಜ್ಯಪಾಲರಿಗೆ ನಕಲಿ ಪತ್ತು ಸಲ್ಲಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೋರಿದ್ದು, ಇಂತಹ ನಕಲಿ ಪತ್ರಗಳನ್ನು ಬರೆಯುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಚಲುವರಾಯಸ್ವಾಮಿ ಕೋರಿದ್ದಾರೆ.

N Chaluvaraya Swamy Letter

ಸಿಐಡಿ ತನಿಖೆಗೆ ಕೊಡಲು ಕಾರಣಗಳೇನು?

ರಾಜ್ಯಪಾಲರಿಗೆ ಬರೆದಿದ್ದ ಪತ್ರ ನಕಲಿ ಎಂದು ಹೇಳಲಾಗಿದ್ದು, ಏಳು ಜನರ ಸಹಿಯನ್ನು ಒಬ್ಬರೇ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿರುವುದರಿಂದ ಸಿಐಡಿಗೆ ಕೊಡಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ. ಪತ್ರದಲ್ಲಿ ಜನತಾದಳದ ಹಾಗೂ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಇರುವುದರಿಂದ ಹೆಚ್ಚಿನ ತನಿಖೆಯ ಅಗತ್ಯ ಇದೆ ಎಂದು ಮೂಲಗಳು ಹೇಳುತ್ತವೆ. ಮಂಡ್ಯದಲ್ಲಿ ದೂರು ದಾಖಲಾಗಿದ್ದು ಎಫ್ಐಆರ್ ಮಾಡಲಾಗಿದೆ.

ದೂರಿನ ಹಿಂದಿದೆಯ ದಳಪತಿಗಳ ಷಡ್ಯಂತ್ರ!?

ಚಲುವರಾಯಸ್ವಾಮಿ ವಿರುದ್ಧ ಲಂಚಕ್ಕಾಗಿ ಒತ್ತಡ ಆರೋಪ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಶಾಸಕರು ನಕಲಿ ಸಹಿ ಮಾಡಿ ರಾಜ್ಯಪಾಲರಿಗೆ ದೂರಿನ ಪತ್ರ ಕಳುಹಿಸಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಜೆಡಿಎಸ್ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ ದೂರು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಸಚಿವ ಚಲುವರಾಯಸ್ವಾಮಿ ಪರ ನಿಲ್ಲುವ ಜೊತೆಗೆ ದಳಪತಿಗಳ ವಿರುದ್ಧ ಕಾಂಗ್ರೆಸ್​ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರಿಗೆ ನೀಡಿರುವ ದೂರಿನ ಪತ್ರದ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.

ದೂರು ಕೊಟ್ಟ ಮಂಡ್ಯ ಜಂಟಿ ಕೃಷಿ ನಿರ್ದೇಶಕ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರು ಮಂಡ್ಯ ಎಸ್ಪಿಗೆ ದೂರು ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಸಹಾಯಕ ಕೃಷಿ ನಿರ್ದೇಶಕರು ದೂರು ನೀಡಿಲ್ಲ. ಆ ಸಂಬಂಧ ನಾನೇ ಖುದ್ದಾಗಿ ವಿಚಾರಿಸಿದ್ದೇನೆ. ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ದೂರು ಪ್ರತಿಯಲ್ಲಿನ ಸಹಿಯು‌ ಕೂಡ ನಮ್ಮದಲ್ಲ ಎಂದು ಹೇಳಿದ್ದಾರೆ. ದುರುದ್ದೇಶದಿಂದ ನಮ್ಮ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು ಸಲ್ಲಿಸಿರುವ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

N Chaluvaraya Swamy

ಬೃಹತ್ ಪ್ರತಿಭಟನೆ

ಚಲುವರಾಯಸ್ವಾಮಿ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಇದು ಸಚಿವರ ವಿರುದ್ಧ ನಡೆದಿರುವ ಷಡ್ಯಂತ್ರ ಎಂದು ಆರೋಪ ಮಾಡಿದ್ದಾರೆ. ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು ನೀಡಲಾಗಿದೆ. ಕೃಷಿ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಿದ್ದಾರೆ. ನಕಲಿ ದೂರು ಪತ್ರ ಸಲ್ಲಿಸಿದವರನ್ನು ಪತ್ತೆ ಹಚ್ಚಬೇಕು. ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಬೇಕು. ಇಷ್ಟೇ ಅಲ್ಲದೆ, ನಕಲಿ ದೂರದಾರರಿಗೆ ಬೆಂಬಲ ಕೊಟ್ಟ ಪಕ್ಷದ ವಿರುದ್ಧವು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದು, ಮಂಡ್ಯದ ಸಂಜಯ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ‌‌ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net