

ಬೆಳಗಾವಿ: ಪಾಕಿಸ್ತಾನದ ಗುಪ್ತಚರ ಐಎಸ್‍ಐ ಜತೆ ಸಂಪರ್ಕ ಹೊಂದಿರುವ ಮೌಲ್ವಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಹೇಗೆ ಜಾರಿ ಮಾಡುತ್ತೀರಿ ನೋಡುವೆ ಎಂದು ಇದೇ ಮೌಲ್ವಿ ಪ್ರಾಣ ಬೆದರಿಕೆ ಹಾಕಿದ್ದ . ಇಂಥವರೊಂದಿಗೆ ಮುಖ್ಯಮಂತ್ರಿ ವೇದಿಕೆ ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಪ್ರಶ್ನಿಸಿದರು.
ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಅವರೊಂದಿಗೆ ಯಾರ‌್ಯಾರು ಇರಬೇಕೆಂದು ಮೊದಲು ತೀರ್ಮಾನವಾಗುತ್ತದೆ. ಅಲ್ಲದೆ ಪೂರ್ವಾಪರ ಹಿನ್ನೆಲೆ, ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದೇ ಮುಖ್ಯಮಂತ್ರಿ ಜತೆ ವೇದಿಕೆ ಹಂಚಿಕೊಳ್ಳುವವರ ಬಗ್ಗೆ ಈ ರೀತಿ ಮಾಡುವುದಿಲ್ಲವೆ ? ಪೊಲೀಸ್ ಇಲಾಖೆ ಹಾಗೂ ಗುಪ್ತಚರಕ್ಕೆ ಮಾಹಿತಿ ಇರುವುದಿಲ್ಲವೆ ? ಯತ್ನಾಳ್ ಕೇಳಿದರು.
ಈ ಮೌಲ್ವಿಯ ಹಿನ್ನಲೆ ಏನೆಂಬುದನ್ನು ಒಂದು ವಾರದಲ್ಲಿ ಸಂಪೂರ್ಣವಾಗಿ ಮಾಹಿತಿ ಕೊಡುತ್ತೇನೆ. ಆದರೆ ಇಂತಹವರ ಜತೆ ಸಿಎಂ ವೇದಿಕೆ ಹಂಚಿಕೊಂಡು ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತಾರೆ. ಇಷ್ಟೂ ಸಾಲದೆಂಬಂತೆ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹಣ ಹಂಚುತ್ತೇನೆ ಎಂದು ಹೇಳಿದ್ದಾರೆ. ನೀವು ಕೇವಲ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ನಿಮಗೆ ಕೇವಲ ಅವರೊಬ್ಬರೇ ಮಾತ್ರ ಮತ ಹಾಕಿದ್ದಾರೆಯೆ ? ಎಂದು ಪ್ರಶ್ನಿಸಿದರು.
ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಸಮುದಾಯದವರನ್ನು ಸಮಾನವಾಗಿ ಕಾಣಬೇಕು. ಕೇವಲ ವೋಟ್ ಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ.ತುಷ್ಟೀಕರಣ ಮಾಡಿದ್ದರಿಂದಲೇ ನಿಮ್ಮ ಪರಿಸ್ಥಿತಿ ಏನಾಯಿತು ಎಂಬುದನ್ನು ಪಂಚರಾಜ್ಯ ಚುನಾವಣೆಗಳಲ್ಲಾದರೂ ತಿಳಿದುಕೊಳ್ಳಿ. ಕಾಂಗ್ರೆಸ್ ಪಕ್ಷದ ವತಿಯಿಂದ ಹಣ ನೀಡಿದರೆ ಸಮಸ್ಯೆಯಿಲ್ಲ. ಸರ್ಕಾರದ ದುಡ್ಡು ಎಲ್ಲ ಸಮುದಾಯಗಳಿಗೂ ಸದ್ಬಳಕೆಯಾಗಬೇಕು ಯತ್ನಾಳ್ ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯ ಹಜರತ್ ಬಾದಶಾ ಪೀರನ್ ದರ್ಗಾದ ಆವರಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಔಲಾದೇ ಗೌಸೆ ಅಜಮ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದನ್ನು ಸ್ಮರಿಸಬಹುದು.
ನಾನಾಗಿಯೇ ದೆಹಲಿಗೆ ಹೋಗುವುದಿಲ್ಲ. ದೆಹಲಿಯಿಂದ ಕರೆ ಬಂದ ಮೇಲೆ ಹೋಗುತ್ತೇನೆ. ನಿನ್ನೆ ಸೂಚನೆ ಕೊಟ್ಟಿದ್ದಾರೆ. ಯಾವಾಗ ಕರೆ ಬರುತ್ತದೆ ಆಗ ಹೋಗುತ್ತೇನೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರಿಗೂ ಹೇಳಿರಬಹುದು. ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಉಚಿತ ಇಲ್ಲವೆಂದು ಯತ್ನಾಳ್ ಹಾಸ್ಯ ಚಟಾಕಿ ಹಾರಿಸಿದರು.