ಕ್ರೀಡಾ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ|Scolds

ccm
Published on

ಬೆಂಗಳೂರು: ಕ್ರೀಡಾ ಪ್ರಾಧಿಕಾರದ ಪ್ರಗತಿ, ತರಬೇತುದಾರರ ನೇಮಕ, ಕ್ರೀಡಾಪಟುಗಳಿಗೆ ಪ್ರೊಟೀನ್‌ಯುಕ್ತ ಆಹಾರದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅಧಿಕಾರಿಗಳನ್ನು ತರಾಟೆ(CM scolds sports department officials)ತೆಗೆದುಕೊಂಡರು. ಕ್ರೀಡಾ ಸಮಿತಿಯಿಂದ ಕ್ರೀಡಾ ಪ್ರಾಧಿಕಾರ ಆದರೂ ಕಾಣದ ಪ್ರಗತಿಯ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಂಡಾಮಂಡಲರಾದರು.

ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಇದನ್ನು ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಸಿಎಂ, ನಿಗಧಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಸ್ಪೋರ್ಟ್ಸ್ ಅಥಾರಿಟಿ ಆ್ ಇಂಡಿಯಾದ ಕಾರ್ಯ ಚಟುವಟಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದಕ್ಕಿಂತ ಉತ್ತಮ ರೀತಿಯಲ್ಲಿ ನಮ್ಮ ಮಿತಿಯೊಳಗೆ ಕ್ರೀಡಾ ಕಾರ್ಯ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕ್ರಮವಹಿಸಲು ಸೂಚಿಸಿದರು.

ಮುಂದಿನ ಐದಾರು ತಿಂಗಳಲ್ಲಿ ದಸರಾ ಕ್ರೀಡಾಕೂಟ ಆರಂಭವಾಗುವುದರೊಳಗೆ ಪ್ರಾಧಿಕಾರ ಕ್ರಿಯಾಶೀಲ ಆಗಬೇಕು ಎಂದು ತಾಕೀತು ಮಾಡಿದರು.

ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟರೂ ಅಗತ್ಯ ತರಬೇತುದಾರರ ನೇಮಕಾತಿ ಆಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದರು. 176 ತರಬೇತುದಾರರ ನೇಮಕಾತಿಗೆ ನಾನೇ ಸೂಚಿಸಿ ಒಂದು ವರ್ಷ ಆಗಿದೆ. ಆದರೂ ನೇಮಕಾತಿ ಪ್ರಕ್ರಿಯೆ ಚುರುಕು ಆಗದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಪ್ರತೀ ಜಿಲ್ಲೆಯಲ್ಲೂ ಉಪ ನಿರ್ದೇಶಕರು ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.

ಪ್ರತೀ ವರ್ಷ ಪ್ರಾಧಿಕಾರದ ಸಭೆ, ಆಡಿಟ್ , ನೇಮಕಾತಿ ನಡೆಯಬೇಕು. ತಪ್ಪಿದರೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಅನುದಾನ ನಿಗದಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸುವ ಮೊದಲು ಕನಿಷ್ಟ 15 ರಾಷ್ಟ್ರಗಳು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸರಿಯಾದ ಗೈಡ್ ಲೈನ್ಸ್ ಗಳನ್ನು ಸಿದ್ಧಪಡಿಸಿ ಎಂದು ಹೇಳಿದರು.

ಕೇವಲ ಲೆಟರ್‌ಹೆಡ್‌ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟ ಎಂದು ಬರುವ ಸಂಸ್ಥೆಗಳಿಗೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕ್ರೀಡಾಕೂಟ ನಡೆಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಕಂಬಳವನ್ನು ಗ್ರಾಮೀಣ ಕ್ರೀಡೆ ಎಂದು ಮಾನ್ಯತೆ ನೀಡಿ ಪ್ರೋತ್ಸಾಹ ನೀಡುವ ಬಗ್ಗೆ ಚರ್ಚಿಸಲಾಯಿತು. ಕ್ರೀಡಾಕೂಟಗಳಿಗೆ ಅನುದಾನ ನೀಡುವುದು ಆನ್‌ಲೈನ್‌ನಲ್ಲಿ ದಾಖಲಾಗಬೇಕು. ಕ್ರೀಡಾಕೂಟ ಮುಗಿದ ಬರುವವರಿಗೆ ಅವಕಾಶ ಇರಬಾರದು ಎನ್ನುವ ಬಗ್ಗೆ ಚರ್ಚಿಸಲಾಯಿತು.

ಕಂಠೀರವ ಕ್ರೀಡಾಂಗಣ ಹವಾ ನಿಯಂತ್ರಿತ ವ್ಯವಸ್ಥೆ ಶೀರ್ಘ್ರದಲ್ಲಿ ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.

ಕಂಠೀರವ ಕ್ರೀಡಾಂಗಣ ನಿರ್ಮಾಣವಾಗಿ 29 ವರ್ಷಗಳಾಗಿರುವುದರಿಂದ ಪ್ರೇಕ್ಷಕರ ಸುರಕ್ಷತೆಗೆ ಗ್ಯಾಲರಿಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಕಂಠೀರವ ಕ್ರೀಡಾಂಗಣದ ಜಿಮ್, ಶೌಚಾಲಯ, ಟ್ರಾಕ್‌ಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು. ಕ್ರೀಡಾಪಟುಗಳಿಗೆ ಅಗತ್ಯವಾದಷ್ಟು ಪೌಷ್ಠಿಕಾಂಶ ಮತ್ತು ಪ್ರೋಟೀನ್‌ಯುಕ್ತ ಆಹಾರ ಕೊಡಬೇಕು. ಪದೇ ಪದೇ ಪರಿಶೀಲನೆ ನಡೆಸಿ, ಲೋಪ ಕಂಡರೆ ವಾರ್ಡನ್‌ಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ , ಕ್ರೀಡಾ ಹಾಸ್ಟೆಲ್ ಗಳಿಗೆ ಸರ್ಪರೈಸ್ ವಿಜಿಟ್ ಮಾಡಿ, ಅಲ್ಲೇ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಲು ಸಿಎಂ ಸೂಚನೆ ನೀಡಿದರು.

ಆನ್‌ಲೈನ್‌ನಲ್ಲಿ ಸಭೆಗೆ ಹಾಜರಾದ ಡಿಸಿಎಂ

ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನೆ ನಡೆಯುವ ವೇಳೆ ಚನ್ನಪಟ್ಟಣದಿಂದ ಆನ್‌ಲೈನ್ ಮೂಲಕ ವಿಡಿಯೋ ಕಾನ್ಪರೆನ್ಸ್ ಗೆ ಬಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net