

ಜೈಪುರ: 'ಸಾರ್ವಜನಿಕರೇ ದಯವಿಟ್ಟು ಸಹಕರಿಸಿ.. ಕರೊನಾ ಚಿಕಿತ್ಸೆ ಕುರಿತು ಯಾವ ವೈದ್ಯರಿಗೂ ಸರಿಯಾಗಿ ತಿಳಿದಿಲ್ಲ. ಕೋವಿಡ್-19 ಗುಣಪಡಿಸುವ ಔಷಧ ಅಥವಾ ಬರದಂತೆ ತಡೆಯುವ ಲಸಿಕೆ ಇನ್ನೂ ಯಾರೂ ಕಂಡು ಹಿಡಿದಿಲ್ಲ' ಎಂಬುದಾಗಿ ಮುಖ್ಯಮಂತ್ರಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮ್ಮ ರಾಜ್ಯದ ಜನರಲ್ಲಿ ಇಂಥದ್ದೊಂದು ವಿನಂತಿ ಮಾಡಿಕೊಂಡಿದ್ದಾರೆ. ತುಂಬ ಕಂಪನಿಗಳು ಕರೊನಾ ಔಷಧ ಕಂಡುಹಿಡಿಯಲು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಿವೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಓಡಾಡಲು ಆರಂಭಿಸಿದರೆ ಕೋವಿಡ್ ಸೋಂಕನ್ನು ತಡೆಯಬಹುದು ಎಂದು ರಾಜಸ್ಥಾನದ ಹಲವು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರೆಲ್ಲರೂ ಮಾಸ್ಕ್ ಧರಿಸಿಯೇ ಓಡಾಡಬೇಕು ಎಂದು ಗೆಹ್ಲೋಟ್ ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಕರೊನಾ ಬುಲೆಟಿನ್: ಸೋಂಕಿತರ ಸಂಖ್ಯೆ 7.5 ಲಕ್ಷದತ್ತ…
ಹಲವು ಸೋಂಕಿತರು ಈಗ ಗುಣವಾಗಿದ್ದಾರೆ. ಆದರೆ ಆ ಬಳಿಕ ಬೇರೆ ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ವೈರಸ್ ಕೂಡ ತನ್ನ ಸ್ವಭಾವ ಬದಲಿಸುತ್ತಿದೆ. ಹೀಗಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಅವರು ವಿನಂತಿಸಿದ್ದಾರೆ. (ಏಜೆನ್ಸೀಸ್)