

ಡೆಹ್ರಾಡೂನ್ : ಸ್ವತಂತ್ರ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ. ಉತ್ತರಾಖಂಡದಲ್ಲಿ ಇಂದಿನಿಂದ(ಜನವರಿ 27) ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಿದೆ. ಇಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ( CM Pushkar Singh Dhami)ಈ ಔಪಚಾರಿಕ ಘೋಷಣೆ ಮಾಡಿದ್ದಾರೆ.
ಜತೆಗೆ ಹೊಸದಾಗಿ ಜಾರಿಗೆ ತಂದಿರುವ ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿನ ನಿಯಮಗಳನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ವಿವರಿಸಿದರು. ರಾಜ್ಯದಲ್ಲಿ ಎಲ್ಲಾ ಧರ್ಮಗಳಿಗೆ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ ಮತ್ತು ಹೆಣ್ಣುಮಕ್ಕಳಿಗೆ ಪಾಲಕರ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗಿದೆ ಎಂದು ಹೇಳಿದರು.
ಪ್ರತಿ ದೇಶದಲ್ಲಿ ಕಾನೂನುಗಳನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕ್ರಿಮಿನಲ್ ಮತ್ತು ಸಿವಿಲ್. ಕ್ರಿಮಿನಲ್ ಕಾನೂನು ಕಳ್ಳತನ, ಕೊಲೆ ಅಥವಾ ಹಿಂಸೆಯಂತಹ ಪ್ರಕರಣಗಳಿಗೆ ಅನ್ವಯಿಸುತ್ತದೆ. ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಒಂದೇ ರೀತಿಯ ನಿಯಮಗಳು ಮತ್ತು ಶಿಕ್ಷೆಗಳಿವೆ. ಮದುವೆ, ವಿಚ್ಛೇದನ, ಆಸ್ತಿ ವಿವಾದಗಳಂತಹ ವೈಯಕ್ತಿಕ ವಿಷಯಗಳಲ್ಲಿ ಸಿವಿಲ್ (ನಾಗರಿಕ) ಕಾನೂನು ಅನ್ವಯಿಸುತ್ತದೆ. ಇದು ಸಂಪ್ರದಾಯಗಳನ್ನು ಆಧರಿಸಿದೆ.
ಭಾರತದಲ್ಲಿ ವಿವಿಧ ಧರ್ಮಗಳಿಗೆ ವಿಭಿನ್ನ ವೈಯಕ್ತಿಕ ಕಾನೂನುಗಳಿವೆ. ಉದಾಹರಣೆಗೆ, ಹಿಂದೂಗಳಿಗೆ ಮದುವೆ ಮತ್ತು ವಿಚ್ಛೇದನದ ನಿಯಮಗಳು ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ಬರುತ್ತವೆ. ಆದರೆ ಮುಸ್ಲಿಮರಿಗೆ ಅವು ಮುಸ್ಲಿಂ ವೈಯಕ್ತಿಕ ಕಾನೂನನ್ನು ಆಧರಿಸಿವೆ. ಅದೇ ರೀತಿ ಕ್ರೈಸ್ತರು ಮತ್ತು ಸಿಖ್ಖರಿಗೂ ಪ್ರತ್ಯೇಕ ಕಾನೂನುಗಳಿವೆ. ಏಕರೂಪ ನಾಗರಿಕ ಸಂಹಿತೆಯ ಮೂಲಕ ಎಲ್ಲ ಧರ್ಮದವರಿಗೂ ಮದುವೆ, ವಿಚ್ಛೇದನ, ಆಸ್ತಿ ವಿಚಾರದಲ್ಲಿ ಸಮಾನತೆ ತರುವ ಪ್ರಯತ್ನ ನಡೆದಿದೆ.(ಏಜೆನ್ಸೀಸ್)