

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಒಂದೇ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ರಾಮಭಕ್ತರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ, ಕಿರುಕುಳ ನೀಡುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ಸೇಡು ತೀರಿಸಿಕೊಳ್ಳುವ ಹಾಗೂ ಅವರನ್ನು ಲೋಕಸಭೆ ಚುನಾವಣೆ ಕಣದಿಂದ ತಪ್ಪಿಸಲು ಸ್ವತಃ ಮುಖ್ಯಮಂತ್ರಿ ಅವರೇ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪ ಮಾಡಿದರು.
ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಸರ್ಕಾರ ಕಿರುಕುಳ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಷಡ್ಯಂತ್ರದ ಭಾಗವಾಗಿದೆ ಎಂದು ಟೀಕಿಸಿದರು.
ಮರ ಕಡಿದ ಆರೋಪಕ್ಕೆ ಗುರಿ ಆಗಿರುವ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಮೇಲೆ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಬಗ್ಗೆ ಹಲವಾರು ಅನುಮಾನಗಳು ಇವೆ. ಪ್ರತಾಪ್ ಸಿಂಹಗೆ ಪಾಠ ಕಲಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಅ ಜಾಗದಲ್ಲಿ ಹಾಕುವಂತೆ ಹೇಳಿದ್ದರು. ಸಿಎಂ ಆದೇಶದಂತೆ ಬೀಟೆ ಮರವನ್ನು ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕೋಕೆ ಸಿಎಂ ಹೇಳಿದ್ದಾರೆ. ಪ್ರತಾಪ್ ಸಿಂಹನ ಸಹೋದರ ಮರ ಕಡಿದಿಲ್ಲ. ಸಿಎಂ ಹೇಳಿ ಮರ ಕಡಿಸಿ ಹಾಕಿಸಿ ಪ್ರತಾಪ್ ಸಿಂಹ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಸಿಎಂ ಅವರು ಸಾಚಾ ಆಗಿದ್ದರೆ ಹೇಳಲಿ. ಅವರ ಪೋನ್ ಕಾಲ್ ಲಿಸ್ಟ್ ತೆಗೆಯಿರಿ, ಸತ್ಯ ಗೊತ್ತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್‌ನವರು ವಿರೋಧಿಗಳ ದನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಕರ ಸೇವಕರ ಮೇಲೆ ದೌರ್ಜನ್ಯ. ಇದು ನಾಚಿಕೆಗೇಡು.
ವಿಕ್ರಂಸಿಂಹ ಮೇಲಿನ ಪ್ರಕರಣ ಅಧಿಕಾರ ದುರ್ಬಳಕೆಯ ಪರಮಾವಧಿ ಎಂದು ಕಿಡಿ ಕಾರಿದರು. ಶಾಸಕ ಹಣ ಪಡೆದು ಅರಣ್ಯಾಧಿಕಾರಿಯನ್ನು ವರ್ಗ ಮಾಡಿಸಿಕೊಂಡಿದ್ದಾರೆ. ಆ ಅಧಿಕಾರಿ ಹಣಕೊಟ್ಟು ಈಗ ಅಮಾನತು ಆಗಿದ್ದಾರೆ ಎಂದರು.
ಕರ ಸೇವಕರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಈ ಸರ್ಕಾರ ವಿರೋಧಿಗಳ ಮೇಲೆ ದಬ್ಬಾಳಿಕೆ,ದಮನ ಮಾಡೋ ಕೆಲಸ ಮಾಡುತ್ತಿದೆ. ಅಧಿಕಾರ ದುರುಪಯೋಗ, ಸುಳ್ಳು ಕೇಸ್ ಮೂಲಕ ಕರ ಸೇವಕರ ಬಂಧನ ವಿಚಾರವಾಗಿ ಸಿಎಂ, ಗೃಹ ಸಚಿವರು ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹರಿಪ್ರಸಾದ್ ಅವರ ಗೋಧ್ರ ಹೇಳಿಕೆ ಮಕ್ಕಳಾಟದಂತೆ ಇದೆ. ಪರ-ವಿರೋಧ ಚರ್ಚೆಎರಡು ಕಡೆ ನಡೆಯುತ್ತಿದೆ. ಬಿಜೆಪಿ ನಾಯಕರು, ಕಾರ್ಯಕರ್ತರು, ಸಂಘಟನೆಗಳ ವ್ಯಕ್ತಿಗಳ ಮೇಲೆ ಕೇಸ್ ಹಾಕಿ ಅಧಿಕಾರ ದುರುಪಯೋಗ ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ಪ್ರತಿಭಟನೆ ಪ್ರಾರಂಭ ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.