

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದೆ. ಶ್ರೀನಗರದಲ್ಲಿ ಭಾನುವಾರ(ನವೆಂಬರ್ 3) ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಪ್ರವಾಸಿ ಸ್ವಾಗತ ಕೇಂದ್ರ (ಟಿಆರ್‌ಸಿ) ಮತ್ತು ವಾರದ ಮಾರುಕಟ್ಟೆ ಮೇಲೆ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದ ದಾಳಿ ಕುರಿತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ(CM) ಒಮರ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.
ಕಣಿವೆಯಲ್ಲಿ ಕೆಲವು ಸಮಯದಿಂದ ದಾಳಿಯ ಸುದ್ದಿ ಮುನ್ನೆಲೆಗೆ ಬರುತ್ತಿವೆ. ಶ್ರೀನಗರದ ಲಾಲ್ ಚೌಕ್ನಲ್ಲಿರುವ ‘ಸಂಡೇ ಮಾರ್ಕೆಟ್’ನಲ್ಲಿ ಸರಕುಗಳನ್ನು ಖರೀದಿಸಲು ಬಂದಿದ್ದ ಜನರ ಮೇಲೆ ಗ್ರೆನೇಡ್ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂತಹ ಸುದ್ದಿ ನಿಜಕ್ಕೂ ಆತಂಕಕಾರಿ. ಅಮಾಯಕ ನಾಗರಿಕರನ್ನು ಗುರಿಯಾಗಿಸಲು ಯಾವುದೇ ಸಮರ್ಥನೆ ಇಲ್ಲ. ಕಣಿವೆಯ ಜನರು ಯಾವುದೇ ಭಯವಿಲ್ಲದೆ ತಮ್ಮ ಜೀವನವನ್ನು ನಡೆಸುವಂತಾಗಲು ಎಲ್ಲಾ ಭದ್ರತಾ ಕಾರ್ಯವಿಧಾನಗಳು ಕೆಲಸ ಮಾಡಬೇಕು. ಇದರಿಂದ ಕಣಿವೆಯಲ್ಲಿ ಹರಡುವ ಇಂತಹ ಅಶಾಂತಿಯನ್ನು ನಿಲ್ಲಿಸಬಹುದುನ ಎಂದು ಹೇಳಿದರು.
ದಾಳಿಯು ಪಿತೂರಿಯ ಭಾಗವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ನಾಯಕ ರವೀಂದರ್ ಶರ್ಮಾ ಆರೋಪಿಸಿದ್ದಾರೆ. ಇಲ್ಲಿನ ವಾತಾವರಣ ಕೆಡಿಸುವ ಷಡ್ಯಂತ್ರ ಇದಾಗಿದೆ. ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಂತಹ ಘಟನೆಗಳು ಹೆಚ್ಚಾಗಿವೆ. ಸಂಡೇ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಗಾಯಗೊಂಡವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಕಣಿವೆಯಲ್ಲಿ ಉಗ್ರಗಾಮಿತ್ವ ಇನ್ನೂ ಇದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಕೇಂದ್ರ ಸರ್ಕಾರವು ತನ್ನ ಕೈಯಲ್ಲಿ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸುವುದಾಗಿ ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 2 ಎನ್‌ಕೌಂಟರ್‌ಗಳನ್ನು ನಡೆಸಿವೆ. ಕಣಿವೆಯಲ್ಲಿ ಶಾಂತಿ ಕಾಪಾಡಲು ಭದ್ರತಾ ಪಡೆಗಳು ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಅನಂತನಾಗ್ ಮತ್ತು ಶ್ರೀನಗರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಿದ್ದಾರೆ. ಭದ್ರತಾ ಪಡೆಗಳು ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರನ್ನು ಹತ್ಯೆಗೈದಿವೆ. ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಮೂವರು ಭಯೋತ್ಪಾದಕರ ಪೈಕಿ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಪಾಕಿಸ್ತಾನದ ಉನ್ನತ ಕಮಾಂಡರ್ ಕೂಡ ಸೇರಿದ್ದಾನೆ ಎನ್ನಲಾಗಿದೆ.(ಏಜೆನ್ಸೀಸ್)