ಬರಗಾಲದಲ್ಲೂ ಸಿಎಂ ಶೋಕಿ; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ

kumaraswamy
Published on

ಬೆಂಗಳೂರು: ರಾಜ್ಯ ತೀವ್ರ ಬರಗಾಲ, ವಿದ್ಯುತ್ ಕ್ಷಾಮದಿಂದ ಬಳಲುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಐಶಾರಾಮಿ ಜೀವನದ ಮೂಲಕ ಶೋಕಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ನಿವಾಸಕ್ಕೆ ಹೊಸದಾಗಿ ಕಾನ್ಫ್‌ರೆನ್ಸ್ ಹಾಲ್ ಮಾಡಿಕೊಂಡಿದ್ದಾರೆ. ಅದಕ್ಕೆ 3 ಕೋಟಿ ರೂ.ಗಳಷ್ಟು ಜನರ ದುಡ್ಡು ಖರ್ಚು ಮಾಡಿದ್ದಾರೆ. ಅದರ ಜತೆಗೆ ಕಾವೇರಿ ನಿವಾಸಕ್ಕೆ 1.90 ಕೋಟಿ ರೂ. ಬೆಲೆ ಬಾಳುವ ಸ್ಟ್ಯಾನ್ಲಿ ವಿದೇಶಿ ಬ್ರಾಂಡಿನ ಸೋಫಾ ಸೆಟ್ ಸೋಫಾ ಸೆಟ್, ಕಾಟ್ ಹಾಕಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಹಣ ನೀಡಲಾಗಿಲ್ಲ. ಹಾಗಾದರೆ ಅದಕ್ಕೆ ಹಣ ಕೊಟ್ಟವರು ಯಾರು? ಇಂಥ ಐಶಾರಾಮಿ ಸೋಫಾ, ಕಾಟ್‌ಗಳನ್ನು ಬಳಸುವ ವ್ಯಕ್ತಿ ಸಮಾಜವಾದಿನಾ? ಎಂದು ಪ್ರಶ್ನಿಸಿದರು.

ನನಗೆ ಬಂದಿರುವ ಮಾಹಿತಿ ಪ್ರಕಾರ ಯಾರೋ ಸಚಿವರೊಬ್ಬರ ಕಡೆಯವರು ಅದನ್ನೆಲ್ಲ ಮಾಡಿಸಿದ್ದಾರಂತೆ. ಇದೆನ್ನೆಲ್ಲ ನೋಡುತ್ತಿದ್ದರೆ ಇದು ಹ್ಯುಬ್ಲೆಟ್ ವಾಚ್‌ನ ಅಪ್ಡೇಟೆಡ್ ವರ್ಷನ್ ಥರಾ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಸರಕಾರಕ್ಕೆ ಬರಕ್ಕಿಂತ ಕಾರುಗಳನ್ನು ಖರೀದಿ ಮಾಡಿಸಲಿಕ್ಕೆ, ಸಚಿವರ ನಿವಾಸಗಳನ್ನು ಡೆಕೋರೇಟ್ ಮಾಡೋದಕ್ಕೆ ಹಣ ಖರ್ಚು ಮಾಡುತ್ತಿದ್ದಾರೆ. ಬಡಪಾಯಿ ರೈತರಿಗೆ ಕೊಡಲಿಕ್ಕೆ ಇವರ ಬಳಿ ಹಣ ಇಲ್ಲ. ಮಂತ್ರಿಗಳ ಮನೆ ಸಿಂಗಾರಕ್ಕೆ ಹತ್ತು ಕೋಟು ರೂ. ಖರ್ಚು ಮಾಡುತ್ತಿದ್ದಾರೆ. ನಾನು ಈ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಇಂಥ ಖರ್ಚಿಗೆ ಒಂದು ರೂಪಾಯಿ ಕೊಡುತ್ತಿರಲಿಲ್ಲ. ಒಂದು ಕಾರು ಖರೀದಿ ಮಾಡಲು ಬಿಡಲಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net