ಶಾಸಕ ದಂಪತಿ ಸಾಧನೆ ಏನು? : ಎಚ್‌ಡಿಕೆಗೆ ಸಿ.ಎಂ. ಲಿಂಗಪ್ಪ ಪ್ರಶ್ನೆ ಕಣ್ವ ಸಂತ್ರಸ್ತರಿಗೆ ಖಾತೆ ಮಾಡಿಸಿಕೊಡಲಿ ಸಾಕು

15-10-rama-cong
Published on

ರಾಮನಗರ : ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆ ಡಿ.ಕೆ. ಸಹೋದರರು ಜಿಲ್ಲೆಯ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುವ ಎಚ್‌ಡಿಕೆ ಅವರು, ಶಾಸಕರಾಗಿ ಸಾಧನೆ ಮಾಡಿದ್ದೇನು ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಪ್ರಶ್ನಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿ ದಂಪತಿಯೇ ಶಾಸಕರಾಗಿದ್ದು, ಕ್ಷೇತ್ರಗಳ ಅಭಿವೃದ್ಧಿ ಸಾಧನೆ ಏನು ಎಂದರು.

ಕಣ್ವ ಜಲಾಶಯ ನಿರ್ಮಾಣ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ದೊಡ್ಡಮಣ್ಣು ಗುಡ್ಡೆ ಪ್ರದೇಶದಲ್ಲಿ ಜಮೀನು ನೀಡಿ, ಹಕ್ಕುಪತ್ರ ಕೊಡಲಾಗಿದೆ. ಆದರೆ ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಈ ವಿಚಾರದಲ್ಲಿ ಕುಮಾರಸ್ವಾಮಿಯವರಾಗಲೀ, ಅನಿತಾ ಅವರಾಗಲೀ ಒಮ್ಮೆಯೂ ಸಭೆ ಕರೆಯಲಿಲ್ಲ. ಸಂತ್ರಸ್ತರ ಮನವಿ ಆಲಿಸಲಿಲ್ಲ. ಆದರೆ, ಸಂಸದ ಡಿ.ಕೆ.ಸುರೇಶ್ ಹಲವಾರು ಸಭೆ ನಡೆಸಿದ್ದಾರೆ. ಕೆಲವು ಪ್ರಗತಿಯಾಗಿದೆ ಎಂದರು.

ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಸಾಗುವಳಿ ಚೀಟಿ ಹೊಂದಿದ ರೈತರಿಗೆ ಉಳುಮೆ ಮಾಡುವ ಭೂಮಿಗೆ ಖಾತೆ ಮಾಡಿಕೊಡಿ ಎಂದು ಆದೇಶ ಮಾಡಿದ್ದರು. ಶಾಸಕರ ನೇತತ್ವದ ಸಮಿತಿ ರಚನೆಯಾಗಿದೆ. ಇಬ್ಬರೂ ಶಾಸಕರು ರೈತರಿಗೆ ಖಾತೆ ಮಾಡಿಸಿಕೊಡಲಿ ಅಷ್ಟು ಸಾಕು ಎಂದು ಲಿಂಗಪ್ಪ ಹೇಳಿದರು.ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ, ಜಿಯಾವುಲ್ಲಾ, ಕೆ.ರಾಜು, ಪಾರ್ವತಮ್ಮ ಮುಂತಾದವರು ಇದ್ದರು.

ಕುಮಾರಸ್ವಾಮಿ ಬಳಸಿದ ಪದಗಳು ಸಂಸದೀಯವಲ್ಲ. ಪ್ರಧಾನಮಂತ್ರಿಯಾಗಿದ್ದವರ ಮಗನಾಗಿ, ಎರಡು ಬಾರಿ ಮುಖ್ಯಮಂತ್ರಿಗಳಾಗಿ ಪದ ಬಳಕೆ ಬಗ್ಗೆ ಎಚ್ಚರವಿರಬೇಕು. ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ನನ್ನ ಸರ್ಕಾರವನ್ನು ಕೆಡವಿದರು ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ವಿರೋಧ ಪಕ್ಷದ ಸ್ಥಾನವನ್ನು ಪುಟಗೋಸಿಗೆ ಹೋಲಿಸಿದ್ದಾರೆ. ವಿರೋಧ ಪಕ್ಷ ಸ್ಥಾನ ಪುಟಗೋಸಿಯಾದರೆ ಮುಖ್ಯಮಂತ್ರಿಗಳ ಸ್ಥಾನ ಮಹಾಪುಟಗೋಸಿ ಅಥವಾ ಅರೆಕಚ್ಚೆ ಏನು? ಎಂದು ಲಿಂಗಪ್ಪ ಹರಿಹಾಯ್ದರು.

ಮೇಲಾಗಿ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಬರೀ ಡೀಲಿಂಗ್‌ನಲ್ಲೇ ಕಾಲ ಕಳೆಯುತ್ತಾ, ಸರ್ಕಾರದ ಮಂತ್ರಿಗಳನ್ನು, ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳದೆ, ಸ್ವಯಂಕತ ಅಪರಾಧದಿಂದ ಅಧಿಕಾರ ತ್ಯಜಿಸಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡರು. ಇದಕ್ಕೆ ಸಿದ್ದರಾಮಯ್ಯನವರನ್ನು ದೂಷಿಸುವುದು ಸರಿಯಲ್ಲ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರನ್ನು ಕುಮಾರಸ್ವಾಮಿ ಬೈಯ್ಯುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಬ್ರೂಟಸ್ ಎಂದು ಕರೆದಿದ್ದಾರೆ. ಬ್ರೂಟಸ್‌ಗೆ ಹೋಲಿಸಿದ ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು ಎಂದು ಜರಿದ ಅವರು ಕುಮಾರಸ್ವಾಮಿ ಕಠೋರ ನಾಗರಹಾವು ಎಂದು ಹೇಳಿದರು.

ಅಣ್ಣನ ಮೂಲಕ ₹10 ಸಾವಿರ ಕೋಟಿ ಲೂಟಿ :  ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ತಮ್ಮ ಅಣ್ಣನ ಮೂಲಕ 10 ಸಾವಿರ ಕೋಟಿ ರೂ. ಲೂಟಿ ಹೊಡೆದಿದ್ದಾರೆ ಎಂದು ಲಿಂಗಪ್ಪ ಆರೋಪಿಸಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರು 123 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

ಸದ್ಯ ಚುನಾವಣೆಯಲ್ಲಿ ಗೆದ್ದು ಶಾಸಕರಾಗಲು ಕನಿಷ್ಠ 30 ಕೋಟಿ ರೂ. ವೆಚ್ಚ ಮಾಡಬೇಕಾಗಿದೆ. 123 ಶಾಸಕರನ್ನು ಗೆಲ್ಲಿಸಿಕೊಳ್ಳುವುದು ಮತ್ತು ಚುನಾವಣಾ ವೆಚ್ಚ ಎರಡೂ ಸೇರಿ ಸುಮಾರು 8750 ಕೋಟಿ ರೂ. ಬೇಕು. 10 ಸಾವಿರ ಕೋಟಿ ರೂ. ಲೂಟಿ ಹೊಡೆದಿರುವ ಹಣ ಇದೆ. ಹೀಗಾಗಿಯೇ 123 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net