ಆಡಳಿತಕ್ಕೆ ಚುರುಕು ಬೇಕು; ಜಿಲ್ಲಾ ಪ್ರವಾಸಕ್ಕೆ ಮುಖ್ಯಮಂತ್ರಿ ಸಜ್ಜು...

Editorial
Published on

ಕರೊನಾ ಕಾರಣದಿಂದಾಗಿ ಆರ್ಥಿಕ ಸ್ಥಿತಿಗತಿಯ ಮೇಲೆ ಮಾತ್ರವಲ್ಲ, ಸರ್ಕಾರದ ಒಟ್ಟಾರೆ ಕಾರ್ಯವೈಖರಿ ಮೇಲೂ ನೆರಳು ಬಿದ್ದಂತಿದೆ. ಈ ಅಂಶವನ್ನು ಮತ್ತು ಇದರಿಂದ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ಅರಿತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಜಿಲ್ಲಾ ಪ್ರವಾಸ ಕೈಗೊಂಡು, ಆಯಾ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ನಂತರದಲ್ಲಿ ಸಿಎಂ ಪ್ರವಾಸ ನಿಗದಿಯಾಗಲಿದೆ. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಮಟ್ಟದ ಪ್ರಮುಖ ಅಧಿಕಾರಿಗಳೆಲ್ಲರೂ ಇರುತ್ತಾರೆ. ಮತ್ತು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಾಧ್ಯತೆಯೂ ಇದೆ.

ಕರೊನಾ ಕಾರಣದಿಂದಾಗಿ ಸರಿಸುಮಾರು ಒಂದು ವರ್ಷದಿಂದ ಮುಖ್ಯಮಂತ್ರಿ ಮತ್ತು ಸಚಿವರ ಓಡಾಟ ಸೀಮಿತವಾಗಿದೆ. ಕ್ರಿಯಾಶೀಲ ಸಚಿವರು ಇದ್ದರೂ ಕೆಲಸ ಮಾಡಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಈಗಂತೂ ಕರೊನಾ ನೆವ ಸಕಾರಣವಾಗಿ ಒದಗಿಬಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕರೊನಾ ನೆಪ ಹೇಳಿಕೊಂಡು ಸಾರ್ವಜನಿಕರ ಕೆಲಸಕಾರ್ಯ ಮಾಡಿಕೊಡುವುದಕ್ಕೆ ಸತಾಯಿಸುತ್ತಿದ್ದಾರೆಂಬ ದೂರುಗಳು ವ್ಯಾಪಕವಾಗಿವೆ. ಒಂದು ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೊನಾ ಕೆಲಸಕ್ಕೆ ಬಳಸಿಕೊಂಡಿದ್ದು ಹೌದಾದರೂ, ಈಗ ಆ ಪರಿಸ್ಥಿತಿ ಇಲ್ಲ. ಆದರೆ ಕರೊನಾ ನೆಪ ಮಾತ್ರ ಮುಂದುವರಿದಿದೆ. ಇದರಿಂದ ಜನಸಾಮಾನ್ಯರಿಗೆ ವಿಪರೀತ ತೊಂದರೆ ಆಗುತ್ತಿದೆ ಎಂಬ ದೂರನ್ನು ಸರ್ಕಾರ ಬಹುಕಾಲ ನಿರ್ಲಕ್ಷಿಸಲಾಗದು. ಹೀಗಾಗಿ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಸೂಕ್ತವಾಗಿ ಬಳಸಿಕೊಂಡು, ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು. ಇನ್ನೊಂದೆಡೆ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಯಿಂದ ವಿವರ ಕೇಳಿದ್ದಾರೆಂಬ ಮಾಹಿತಿಯೂ ಇದೆ. ಕೆಲ ಸಚಿವರು ತಮಗೆ ಉಸ್ತುವಾರಿ ಜವಾಬ್ದಾರಿ ಇರುವ ಜಿಲ್ಲೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿಲ್ಲ; ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸುತ್ತಿಲ್ಲ ಎಂಬ ಆಕ್ಷೇಪಗಳೂ ಇವೆ. ಅದರೊಟ್ಟಿಗೆ, ಸದನದಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ರ್ಚಚಿಸುವ ಸಲುವಾಗಿ ಸಿಎಂ ಯಡಿಯೂರಪ್ಪ ಅವರು ಸೋಮವಾರ ಸಚಿವರ ಸಭೆ ಕರೆದಿದ್ದಾರೆ.

ಕರೊನಾದಿಂದಾಗಿ ಸರ್ಕಾರದ ಆದಾಯದ ಮೇಲೆ ಭಾರಿ ಹೊಡೆತ ಬಿದ್ದು, ಅಭಿವೃದ್ಧಿ ಕಾರ್ಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹಣಕಾಸು ಒದಗಿಸಲು ಆಗುತ್ತಿಲ್ಲ ಎಂಬುದು ಕಣ್ಣಿಗೆ ಕಾಣುವ ವಾಸ್ತವ. ಆದರೆ ಕರೊನಾ ನೆಪದಲ್ಲಿ ಆಡಳಿತಯಂತ್ರ ಜಡವಾಗಬಾರದು. ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೆ ತಮ್ಮ ಕೆಲಸಕಾರ್ಯಗಳು ಸರಿಯಾಗಿ ಆಗುತ್ತಿಲ್ಲ ಎಂದಾದರೆ ಜನರು ಸಹಜವಾಗಿಯೇ ಅಸಮಾಧಾನಗೊಳ್ಳುತ್ತಾರೆ. ಬಹಳ ದಿನಗಳ ಕಾಲ ಇದು ಮುಂದುವರಿದರೆ ಸರ್ಕಾರದ ಬಗ್ಗೆ ಅವರ ಭಾವನೆ ಬದಲಾಗುತ್ತದೆ. ಇದಲ್ಲದೆ, ವಿರೋಧ ಪಕ್ಷಗಳು ಇಂಥ ಸನ್ನಿವೇಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಆಡಳಿತಯಂತ್ರಕ್ಕೆ ಬಿಗಿ ತರಲು ಮುಖ್ಯಮಂತ್ರಿಗಳು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇದು ಕಾಟಾಚಾರಕ್ಕೆ ನಡೆಯದೆ ಜನರ ಸಮಸ್ಯೆ-ತೊಂದರೆಗಳಿಗೆ ಸ್ಪಂದನೆ ಸಿಗಬೇಕು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net