

ಕೊಪ್ಪಳ: ಮುಡಾ ಹಗರಣದಲ್ಲಿ ಉದ್ದೇಶಪೂರ್ವಕವಾಗಿ ಸಿಎಂ ಸಿದ್ದರಾಮಯ್ಯ ಹೆಸರು ಎಳೆದು ತರಲಾಗುತ್ತಿದೆ. ಬಿಜೆಪಿ ರಾಜಕಾರಣ ಮಾಡುತ್ತಿದ್ದು, ಇದರಿಂದ ಏನೂ ಲಾಭವಿಲ್ಲ. ಉಳಿದ ಅವಧಿಗೂ ಅವರೇ ಸಿಎಂ ಆಗಿರಲಿದ್ದಾರೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಬಿಜೆಪಿ-ಜೆಡಿಎಸ್ಗೆ ರಾಜಕೀಯ ಹಿನ್ನಡೆಯಾಗುತ್ತಿದೆ. ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಡಿಸ್ಟರ್ಬ್ ಮಾಡಲು ಕಾಯುತ್ತಿದ್ದಾರೆ. ದುರುದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬದ್ಧತೆ ಇರುವ ಮನುಷ್ಯ. ಅವರ ವಿರುದ್ಧ ದೂರು ನೀಡಿದ ಅಬ್ರಾಹಂ ಒಬ್ಬ ಬ್ಲಾಕ್ಮೇಲರ್. ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧವೂ ಆರೋಪ ಮಾಡಿದ್ದ. ಆಗೆಲ್ಲ ಏನೂ ಆಗಿಲ್ಲ. ರಾಜ್ಯಪಾಲರು ಕೇಂದ್ರದ ಒತ್ತಡಕ್ಕೆ ಒಳಗಾಗಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಸಿಎಂಗೆ ನೋಟೀಸ್ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಏಕಾಏಕಿ ಸಿಎಂ ಮೇಲೆ ಪ್ರಕರಣ ದಾಖಲಿಸಲು ಅನುಮತಿಸಲಾಗದು. ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರ ಅವಧಿ ಪೂರ್ಣಗೊಳಿಸುವವರೆಗೂ ಅವರೇ ಸಿಎಂ ಆಗಿರುತ್ತಾರೆ. ಹಿಂದುಳಿದ ವರ್ಗದ ನಾಯಕನೆಂದು ವಿಪಕ್ಷದವರಿಗೆ ಹೊಟ್ಟೆಕಿಚ್ಚು. ಕಾಂಗ್ರೆಸ್ ಲಿಂಗಾಯತ ನಾಯಕರೆಲ್ಲ ಸಭೆ ನಡೆಸಿದ್ದು, ಸಿದ್ದರಾಮಯ್ಯ ಬೆನ್ನಿಗಿದ್ದೇವೆ ಎಂದರು.
ಮೈಸೂರು ಹೊರವಲಯದಲ್ಲಿ 1935ರಲ್ಲಿ ನಿಂಗ ಎಂಬುವರು ಹರಾಜಿನಲ್ಲಿ ಭೂಮಿ ಖರೀದಿಸಿದ್ದಾರೆ. 1992ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿಸಿದ್ದಾರೆ. ಬಡಾವಣೆ ಮಾಡಲು ಮುಡಾ ಭೂ ಸ್ವಾಧಿನ ಮಾಡಿಕೊಂಡಿದೆ. ನಂತರ ಮರಳಿಸಿದೆ. ಇದಾದ ಬಳಿಕ ಮಲ್ಲಿಕಾರ್ಜುನ ಸ್ವಾಮಿ ಸಿಎಂ ಪತ್ನಿ ಹೆಸರಿಗೆ ದಾನಪತ್ರ ಮಾಡಿದ್ದಾರೆ. ನಂತರ ಮುಡಾ ಅಕ್ರಮವಾಗಿ ಸೈಟ್ ಮಾಡಿದೆ. ಶೇ.50:50 ದಂತೆ ಅವರಿಗೆ ಸೈಟ್ ನೀಡಿದ್ದಾರೆ. ಆಗ ಬಿಜೆಪಿ ಅಧಿಕಾರದಲ್ಲಿತ್ತು. ನಮ್ಮ ಸರ್ಕಾರ ಅಕ್ರಮ ಬಡಾವಣೆ ನಿರ್ಮಾಣ ರದ್ದುಪಡಿಸಿ 2023ರಲ್ಲೇ ಆದೇಶಿಸಿದೆ. ಇದರಲ್ಲಿ ಅಕ್ರಮ ಏನಿದೆ ಎಂದು ಪ್ರಶ್ನಿಸಿದರು. ಸಂಸದ ರಾಜಶೇಖರ ಹಿಟ್ನಾಳ ಇದ್ದರು.
ಸಿದ್ದರಾಮಯ್ಯ ಪರ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಈ ಪ್ರಕರಣ ಸಿಬಿಐ ಗೆ ಕೊಡುವಂಥದ್ದೇನಿಲ್ಲ. ಬೇಕಾದರೆ ಕೋರ್ಟ್ ಗೆ ಹೋಗಲಿ. ಸಿಎಂ ಡಿಸ್ಟರ್ಬ್ ಆಗಿಲ್ಲ. ಸರ್ಕಾರಕ್ಕೆ ಯಾವನೂ ಏನೂ ಮಾಡೋಕೆ ಆಗೋಲ್ಲ. ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟರೆ ಸ್ಟೇ ತೆಗೆದುಕೊಳ್ಳುತ್ತೇವೆ. ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರ.
ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರ.