

ಬೆಂಗಳೂರು: ಮುಂಗಾರು ಮುನ್ನ ತಗ್ಗು ಪ್ರದೇಶಗಳು ಸೇರಿದಂತೆ ಅಪಾಯಕಾರಿ ಸ್ಥಿತಿಯಲ್ಲಿರುವ ರಾಜಕಾಲುವೆಗಳ ಸ್ಥಳಗಳನ್ನು ಗುರುತಿಸಿ ಅಲ್ಲೆಲ್ಲ ಮುಂಜಾಗ್ರತಾ ಕ್ರಮ ಏಕೆ ಕೈಗೊಳ್ಳಲಿಲ್ಲ? ನಾಗರಿಕರಿಂದ ದೂರು ಬಂದರೂ ಅವುಗಳನ್ನು ಪರಿಹರಿಸಲು ಏಕಿಷ್ಟು ಅಸಡ್ಡೆ? ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸದೆ ಈಗ ಸಬೂಬು ಹೇಳಿದರೆ ಏನು ಪ್ರಯೋಜನ . . .
ಮಳೆಯಿಂದ ಹಾನಿಗೀಡಾದ ಪ್ರದೇಶಗಳ ವೀಕ್ಷಣೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಅನಾಹುತ ಆಗಿರುವ ಬಹುತೇಕ ಕಡೆಗಳಲ್ಲಿ ರಾಜಕಾಲುವೆಯಿಂದಲೇ ಆಗಿದೆ. ಸರಾಗವಾಗಿ ನೀರು ಹರಿಯದೆ ರಾಜಕಾಲುವೆ ಪಕ್ಕದ ಪ್ರದೇಶಕ್ಕೆ ನೀರು ನುಗ್ಗಿ ಅನಾಹುತ ಘಟಿಸಿದೆ. ಇದನ್ನು ಮೊದಲೇ ಎಚ್ಚರ ವಹಿಸಿದ್ದರೆ ಒಂದಿಷ್ಟು ಹಾನಿ ತಪ್ಪಿಸಬಹುದಿತ್ತಲ್ಲವೇ ಎಂಬ ಸಿಎಂ ಮಾತಿಗೆ ಪಾಲಿಕೆ ಅಧಿಕಾರಿಗಳು ನಿರುತ್ತರರಾದರು.
ಸಂತ್ರಸ್ತರಿಂದ ದೂರುಗಳ ಸುರಿಮಳೆ:
ಈ ಬಾರಿ ಮಳೆಹಾನಿಗೆ ಸಾಯಿ ಲೇಔಟ್‌ನಲ್ಲಿ ಹೆಚ್ಚಿನ ಸಮಸ್ಯೆಗೆ ಒಳಗಾಗಿದೆ. ಅಲ್ಲಿನ ಎಲ್ಲ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಜನರು ಸಂತ್ರಸ್ತರಾಗಿದ್ದಾರೆ. ಈ ಸ್ಥಳಕ್ಕೆ ಸಿಎಂ ಭೇಟಿ ನೀಡಿದಾಗ ಸ್ಥಳೀಯರಿಂದ ದೂರುಗಳ ಸುರಿಮಳೆಯಾಯಿತು. ಸಿಎಂ ಸಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ಜನರು, ಮೊದಲು ನಮ್ಮ ಕಷ್ಟ ಕೇಳಿ. ಆಮೇಲೆ ಉತ್ತರಿಸಿ. ನಿಮ್ಮ ಅಧಿಕಾರಿಗಳು ನಮ್ಮನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಹತ್ತು ವರ್ಷದಿಂದ ಮನೆಗಳಿಗೆ ನೀರು ನುಗ್ಗುವುದು ನಡೆದೇ ಇದೆ. ಪ್ರತಿ ಬಾರಿ ಹಾನಿಯಾದಾಗಲೂ ಇಂಥದ್ದೇ ಉತ್ತರ ನೀಡಿ ಹೋಗುತ್ತೀರಿ. ಆಮೇಲೆ ಜನಪ್ರತಿನಿಧಿಗಳು, ಅಧಿಕಾರಿಗಳು ಕೆಲಸ ಮಾಡದೆ ಮತ್ತೆ ಸಮಸ್ಯೆ ಪುನರಾವರ್ತನೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸಿಎಂ, ಡಿಸಿಎಂ ಮುಖ್ಯರಸ್ತೆಯಲ್ಲೇ ಅಹವಾಲು ಆಲಿಸಿ ಬಸ್ ಹತ್ತಲು ಮುಂದಾದರು. ಈ ವೇಳೆ ನೀರು ನುಗ್ಗಿರುವ ಮನೆಗಳಿಗೆ ಭೇಟಿ ನೀಡುವಂತೆ ಜನರು ಒತ್ತಾಯಿಸಿದರೂ, ಕೆಲ ಮುಖಂಡರು ಸಂತ್ರಸ್ತರನ್ನು ಸಮಾಧಾನಪಡಿಸಿದರು. ಆದರೆ, ಸಾಯಿ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಒತ್ತಾಯ ಮಾಡಿದಾಗ ಮತ್ತೆ ಕೆಲ ಜನರ ಅಹವಾಲು ಆಲಿಸಲಾಯಿತು. ಈ ಬಾರಿ ಶಾಶ್ವತ ಪರಿಹಾರ ಒದಗಿಸುತ್ತೇವೆ. ಕಾಮಗಾರಿ ಕೂಡ ಚುರುಕುಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಇದರ ಹೊರತಾಗಿಯೂ ಸ್ಥಳೀಯರು ಸಮಾಧಾನಗೊಳ್ಳದೆ ಸಿಟ್ಟು ಹೊರಹಾಕಿದರು.
ಸ್ಥಳಪರಿಶೀಲನೆ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕರಾದ ಬೈರತಿ ಬಸವರಾಜು, ಸತೀಶ್‌ರೆಡ್ಡಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ, ಸೌಮ್ಯ ರೆಡ್ಡಿ, ಬಿಡಿಎ ಆಯುಕ್ತ ಎನ್.ಜಯರಾಂ, ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್, ನಗರ ಜಿಲ್ಲಾಧಿಕಾರಿ ಜಗದೀಶ್ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು.