

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಡಿಸಿಗಳೆಂದರೆ ಮಹಾರಾಜರಲ್ಲ. ಆ ಮನೋಭಾವ ಇದ್ದರೆ ಜನಸೇವೆ, ಪ್ರಗತಿ ಸಾಧ್ಯವಿಲ್ಲ..’, ‘ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು ಫಾರ್ವರ್ಡ್ ಮಾಡಿ ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋಕಾ ಡಿಸಿ, ಸಿಇಒಗಳು ಇರೋದು..’ ಇದು ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಚಳಿ ಬಿಡಿಸಿದ ವೈಖರಿ.. ಯೋಜನೆಗಳ ಅನುಷ್ಠಾನದಲ್ಲಿ ಹಿಂದೆಬಿದ್ದ, ಸರ್ಕಾರದ ಆದೇಶ ಪಾಲಿಸದ, ಕಡತ ವಿಲೇವಾರಿ ಮಾಡದೆ ಜನರಿಗೆ ಸ್ಪಂದಿಸದ ಜಿಲ್ಲಾಡಳಿತಗಳನ್ನು ಮುಖ್ಯಮಂತ್ರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಭೆಗೆ ಸ್ಪಷ್ಟ ಅಜೆಂಡಾದೊಂದಿಗೆ ಬಂದಿದ್ದ ಸಿಎಂ, ಎಡವಿರುವ ಕಡೆ ಸರಿಪಡಿಸಿಕೊಳ್ಳುವಂತೆ ತಿಳಿಹೇಳಿ, ಹಾದಿ ತಪ್ಪಿರುವ ಕಡೆ ಎಚ್ಚರಿಸುತ್ತಲೇ ಕಾರ್ಯವೈಖರಿ ತಿದ್ದಿಕೊಳ್ಳುವಂತೆ ಹೆಡ್ ಮಾಸ್ಟರ್ನಂತೆ ಅಧಿಕಾರಿಗಳಿಗೆ ಕಿವಿ ಹಿಂಡಿದರು. ಪಿಂಚಣಿ ಅರ್ಜಿಗಳ ವಿಲೇವಾರಿ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೆ ಜನಸ್ಪಂದನ ಸಭೆ ನಡೆಸಬೇಕು, ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದರು.
ಹೊಣೆ ಹೊರಬೇಕು: ಉದಾಸೀನ, ನಿರ್ಲಕ್ಷ್ಯ, ಕರ್ತವ್ಯಲೋಪಕ್ಕಾಗಿ ಕೆಳ ಹಂತದ ಅಧಿಕಾರಿಗಳ ವಿರುದ್ಧ ಮಾತ್ರವಲ್ಲ, ಇಂದಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಎಚ್ಚರಿಸಿದರು. ‘ಇದು ಅಧಿಕಾರಿಗಳನ್ನು ಟೀಕಿಸಲು ಕರೆದ ಸಭೆ ಅಲ್ಲ ಎಂದು ಗುಡುಗಿದರು.
. ಬಡವರ ಬಗ್ಗೆ ಅನುಕಂಪ ಇರಬೇಕು
. ಜನರನ್ನು ಅನಗತ್ಯವಾಗಿ ಅಲೆಸಬೇಡಿ
. ಸಾರ್ವಜನಿಕರ ದೂರುಗಳನ್ನು ಆಲಿಸಿ
. ಕೂಡಲೇ ಅಗತ್ಯ ಪರಿಹಾರ ಒದಗಿಸಿ
. ಸಮಾನತೆ ನೀಗಿಸಲು ಪ್ರಯತ್ನಿಸಿ
. ಸಂವಿಧಾನ ಕೇವಲ ಓದುವುದಕ್ಕಲ್ಲ
. ಅನುಷ್ಠಾನಕ್ಕೆ ಎಂಬುದನ್ನು ಅರಿಯಿರಿ
. ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕು
1. ಡಿಸಿಗಳೆಂದರೆ ಮಹಾರಾಜರಲ್ಲ. ಆ ಮನೋ ಭಾವ ಇದ್ದರೆ ಜನಸೇವೆ, ಪ್ರಗತಿ ಸಾಧ್ಯವಿಲ್ಲ.
2. ಡಿಸಿ, ಸಿಇಒಗಳು ಇರೋದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು ಫಾರ್ವರ್ಡ್ ಮಾಡಿ ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋಕಾ? ಪರಿಹಾರ ಕೊಡಿಸುವವರು ಯಾರು?
3. ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಸಮೇತ ಜಿಲ್ಲಾ, ತಾಲೂಕು ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲವೇಕೆ? ಜನರ ಕೈಗೆ ಸಿಗದೆ ಇದ್ದರೆ ಅವರೇನು ಮಾಡಬೇಕು?
4. ತಹಶೀಲ್ದಾರ್, ಎ.ಸಿ. ಕೋರ್ಟಲ್ಲಿ ಪ್ರಕರಣ ಬಾಕಿ ಇವೆ, ಡಿಸಿಗಳೇ ಕೇಸ್ ಉಳಿಸಿಕೊಂಡರೆ ಕೆಳಗಿನವರಿಗೆ ಏನು ಸಂದೇಶ ಕೊಡುತ್ತೀರಿ?
5. ಸಿಂಧುತ್ವ ಪ್ರಮಾಣ ಪತ್ರ ಕೊಡುವುದು ತಡವಾದರೆ ಅಂತವರ ಭವಿಷ್ಯ ಹಾಳಾಗುವುದಿಲ್ಲವೇ? ಕಾಲಮಿತಿ ಮೀರಿದ ಪಿಂಚಣಿ ಅರ್ಜಿಗಳು ಇರುವುದೇಕೆ?
ಸಭೆಯಲ್ಲಿ ರೈತರ ಆತ್ಮಹತ್ಯೆ ವಿಚಾರವೂ ಪ್ರಸ್ತಾಪ ಆಯಿತು. ಇಂತಹ ಪ್ರಕರಣಗಳಲ್ಲಿ ಕಾನೂನು ವ್ಯಾಪ್ತಿಯಲ್ಲೇ ಉದಾರತೆಯಿಂದ ವರ್ತಿಸಿ ಪರಿಹಾರ ನೀಡಬೇಕು. ಹಾಗೆಯೇ ರೈತರ ಸಭೆ ನಡೆಸಿ ಜಾಗೃತಿ ಮೂಡಿಸುವ ಜತೆಗೆ ಆತ್ಮವಿಶ್ವಾಸ ತುಂಬಬೇಕೆಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಯಾವ ರೀತಿ ಮಾಡಿದ್ದೀರಿ ಎಂದು ಪರಿಶೀಲಿಸಲು ಕರೆದ ಸಭೆಯಾಗಿದೆ. ಪ್ರತಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿಸಿ, ಸಿಇಓ, ಎಸ್ಪಿ ಪಾತ್ರ ದೊಡ್ಡದು. ಇವರು ಮೂವರು ಸಮನ್ವಯದಿಂದ ಬೇರೆ ಅಧಿಕಾರಿಗಳನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಮಾಡಿದರೆ ಅಭಿವೃದ್ಧಿ ವೇಗವಾಗಿ ಮಾಡಲು ಸಾಧ್ಯ’ ಎಂದು ತಿಳಿ ಹೇಳಿದರು.
‘ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಇವು ಜನರನ್ನು ತಲುಪಬೇಕು ಎಂದ ಸಿಎಂ ನಾನು ಮಂತ್ರಿಯಾಗಿ 40 ವರ್ಷಗಳಾದವು. ರಾಜಕಾರಣಿಗಳು, ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕಿತ್ತು. 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದು ಬಹಳ ಬೇಸರದ ಸಂಗತಿ ಎಂದು ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಅವಲೋಕಿಸಿ ವಿಶ್ಲೇಷಿಸಿದರು.
ಅಂದು ಭ್ರಷ್ಟಾಚಾರ ಹೇಗಿತ್ತು, ಇಂದು ಹೇಗಿದೆ ಎಂದು ನೋಡಿದಾಗ, ಕಾರ್ಯಾಂಗ ಮತ್ತು ಶಾಸಕಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಕಂಡುಬರುತ್ತದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಪರಿಣಾಮಕಾರಿಯಾಗಿ ಕೆಲಸಮಾಡಬೇಕು ಎಂದು ಪ್ರತಿಪಾದಿಸಿದ ಅವರು ಕರ್ನಾಟಕ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅರಿತುಕೊಳ್ಳಬೇಕು. ಇಲ್ಲಿನ ಸಾಕ್ಷರತೆ, ಶಿಕ್ಷಣ, ತಲಾ ಆದಾಯ ಮೊದಲಾದವುಗಳ ಕುರಿತು ತಿಳಿದಿರಬೇಕು ಎಂದು ತಿಳಿಹೇಳಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸದಸ್ಯರು, ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಸೇರಿ ಹಿರಿಯ ಅಧಿಕಾರಿಗಳಿದ್ದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳ ಮೇಲೆರಗಿದರು. ಕಲುಷಿತ ನೀರು ಪ್ರಕರಣ, ಎಸ್ಎಸ್ಎಲ್ಸಿ ಫಲಿತಾಂಶ ಕುಸಿತ ವಿಚಾರ ಇದಕ್ಕೆರಡು ಉದಾಹರಣೆಯಾಗಿ ಕಾಣಿಸಿತು.
| ಕಲುಷಿತ ನೀರು ಕುಡಿದು ಹಲವು ಸಾವು- ನೋವುಗಳು ಸಂಭವಿಸಿವೆ. ಇಂತಹ ಪ್ರಕರಣಗಳು ಮರುಕಳಿಸಿದರೆ, ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
| ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಗಣನೀಯವಾಗಿ ಕುಸಿದಿದೆ. ಇದಕ್ಕೆ ಪರೀಕ್ಷಾ ಅಕ್ರಮ ನಿಯಂತ್ರಣದಲ್ಲಿಟ್ಟಿರುವುದೇ ಒಂದು ಕಾರಣವಾಗಲು ಸಾಧ್ಯವಿಲ್ಲ, ಮುಂದೆ ಹೀಗಾಗಬಾರದೆಂದರು.
. ಆಸ್ತಿ ತೆರಿಗೆಯನ್ನು ವಸೂಲಿ ಮಾಡಿ
. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಿ
. ಸಾರ್ವಜನಿಕರ ಸಂಪರ್ಕದಲ್ಲಿರಿ
. ಕಡತಗಳ ವಿಲೇವಾರಿ ಚುರುಕಾಗಲಿ
. ಅತಿವೃಷ್ಟಿಯಿಂದ ಪ್ರಾಣಹಾನಿ ತಪ್ಪಿಸಿ