ವಾರ್ಡ್ ಇಂಜಿನಿಯರ್‌ಗಳಿಗೆ ಸಿಎಂ ಚಾರ್ಜ್

vidhanasoudha
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಇಂಜಿನಿಯರ್‌ಗಳ ಕಾರ್ಯನಿರ್ವಹಣೆ ಕುರಿತು ತೀವ್ರ ಆಕ್ಷೇಪಣೆ ಕೇಳಿಬರುತ್ತಿರುವುದು ಶುಕ್ರವಾರ ನಡೆದ ಮುಖ್ಯಮಂತ್ರಿಯವರ ನೇತೃತ್ವದ ಸಭೆಯಲ್ಲೂ ಅನುರಣಿಸಿತು.

ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು, ಈ ಸಭೆಯಲ್ಲಿ ಇಂಜಿನಿಯರ್‌ಗಳ ಕುರಿತು ಆಕ್ಷೇಪಣೆ ಬಗ್ಗೆ ಚರ್ಚೆಯಾಯಿತು.

ವಾರ್ಡ್‌ಗೊಬ್ಬ ಇಂಜಿನಿಯರ್ ಇದ್ದಾರೆ, ಅತಿವೃಷ್ಟಿ- ಪ್ರವಾಹ ಸಂದರ್ಭದಲ್ಲಿ ಅವರ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು, ಒಂದು ವೇಳೆ ಕರ್ತವ್ಯಲೋಪ ಎಸಗಿದರೆ, ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯಕ್ತರಿಗೆ ಸಿಎಂ ಸಭೆಯಲ್ಲಿ ಸೂಚನೆ ನೀಡಿದರು.

ಕೆಲವು ತಾಂತ್ರಿಕ ಕಾರಣದಿಂದ ಅಂಡರ್‌ಪಾಸ್‌ನಲ್ಲಿ ನೀರು ಹೋಗುವುದಿಲ್ಲ ಎಂದು ಗೊತ್ತಿದ್ದರೂ ಅಲ್ಲಿ ಕ್ರಮಕೈಗೊಳ್ಳುವುದಿಲ್ಲ. ಮೋಟರ್ ಸಿದ್ಧವಾಗಿಟ್ಟುಕೊಂಡು ಮಳೆ ಹೆಚ್ಚಾಗುತ್ತಿದ್ದಂತೆ ನೀರು ಹೊರಹಾಕಲು ಕ್ರಮಕೈಗೊಳ್ಳಬೇಕು, ಇದು ವಾರ್ಡ್ ಇಂಜಿನಿಯರ್ ಜವಾಬ್ದಾರಿ ಎಂದು ಸಿಎಂ ಸ್ಪಷ್ಟವಾಗಿ ತಿಳಿಸಿದರು.

ಬೆಂಗಳೂರು ನಗರದಲ್ಲಿ ಕಂಟ್ರೋಲ್ ರೂಂ ಗಳನ್ನು ಗುರುತಿಸಲಾಗಿದೆ. ದೊಡ್ಡ ಚರಂಡಿಗಳು ಓಪನ್ ಇರುವ ಸ್ಥಳಗಳನ್ನು ಗುರುತಿಸಿ ಮೊದಲೇ ಬಂದೋಬಸ್ತ್ ಮಾಡಲಾಗಿದೆ. ಇದರಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸಿಎಂ ಸಭೆಯಲ್ಲಿ ಅಭಿಪ್ರಾಯಪಟ್ಟರು.

ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು ಎಂದು ಸೂಚಿಸಲಾಯಿತು. ಕೋಡಿಗೆ ಗೇಟ್ ಅಳವಡಿಸುವ ಮೂಲಕ, ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಲು ಸೂಚಿಸಲಾಯಿತು.

ಪ್ರತಿದಿನ ನಗರದ ಪರಿಸ್ಥಿತಿ ಕುರಿತು ಸಭೆ ನಡೆಸಿ ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ವಲಯ ಆಯುಕ್ತರ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ಎಂಜಿನಿಯರುಗಳಿಗೆ ಜವಾಬ್ದಾರಿ ನಿಗದಿ ಪಡಿಸಬೇಕು ಹಾಗೂ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳಾದ ಬಿಡಿಎ, ಜಲಮಂಡಳಿ, ಬಿಎಂಆರ್ ಸಿ ಎಲ್, ಬಿಬಿಎಂಪಿ ಮೊದಲಾದವುಗಳ ನಡುವೆ ಸಮನ್ವಯ ವಹಿಸುವಂತೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net