

ಬೆಂಗಳೂರು: ರಾಜಧಾನಿಯನ್ನು ಕರೊನಾ ವೈರಸ್ ಕಂಗೆಡಿಸಿರುವ ಮಧ್ಯೆಯೇ ಬಿಬಿಎಂಪಿ ಆಯುಕ್ತರಾಗಿದ್ದ ಬಿ.ಎಚ್.ಅನಿಲ್ಕುಮಾರ್ ಎತ್ತಂಗಡಿ ಮಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ದಿಢೀರ್ ಕ್ರಮ ಆಡಳಿತ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತೆರವಾದ ಜಾಗಕ್ಕೆ ಅನುಭವಿ, ಹಿರಿಯ ಐಎಎಸ್ ಅಧಿಕಾರಿ ಎನ್.ಮಂಜುನಾಥ್ ಪ್ರಸಾದ್ರನ್ನು ತಂದು ಕೂರಿಸುವ ಮೂಲಕ ಸಿಎಂ ತಮ್ಮ ಇರಾದೆ ಏನೆಂಬುದು ದೃಢಪಡಿಸಿದ್ದಾರೆ. ಮಾತಿನ ಚಾಟಿ ಏಟು ಕೊಟ್ಟರೂ ಅನಿಲ್ಕುಮಾರ್ ಭ್ರಷ್ಟಾಚಾರದ ಅಪವಾದ ಏಳುವಂತೆ ಕೈಗೊಂಡ ನಿರ್ಧಾರ ಹಾಗೂ ಉದಾಸೀನತೆಗೆ ಸಿಎಂ ಪರಿಣಾಮಕಾರಿ ಚುಚ್ಚುಮದ್ದು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾವುದೇ ಕಾರಣಕ್ಕೂ ಅವ್ಯವಹಾರ, ನಿರ್ಲಕ್ಷ್ಯ ಸಹಿಸುವುದಿಲ್ಲ. ಬೊಕ್ಕಸದಿಂದ ಖರ್ಚಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡಬೇಕು. ಕರೊನಾ ನಿಯಂತ್ರಣ ಕ್ರಮಗಳಲ್ಲಿ ದಕ್ಷತೆ, ಕಾಳಜಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಿಎಂ ಹೇಳುತ್ತಲೇ ಬಂದಿದ್ದರು. ಸರಿದಾರಿಗೆ ಬಾರದ ಕಾರಣ ತಂಡದ ನಾಯಕನನ್ನು ವರ್ಗಾಯಿಸಿ, ಅಧಿಕಾರಿ ವರ್ಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಚಿವರಿಗೂ ಇದೇ ರೀತಿ ಚಾಟಿ ಬೀಸಿ ವಲಯವಾರು ನಿರ್ವಹಣೆ ಜವಾಬ್ದಾರಿ ಒಪ್ಪಿಸಿದ್ದನ್ನು ಉಲ್ಲೇಖಿಸಬಹುದು.
ಕಾರಣವೇನು?: ಸೋಂಕು ತಡೆಗೆ ಸರ್ಕಾರ ಕೈಗೊಂಡ ನಿರ್ಧಾರಗಳು, ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳ ಅನುಷ್ಠಾನದಲ್ಲೂ ಅಧೀನ ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳುವಲ್ಲಿ ಅನಿಲ್ಕುಮಾರ್ ಮುಗ್ಗರಿಸಿದ್ದರು. ಇದರಿಂದಾಗಿಯೇ ಹೈಕೋರ್ಟ್ನಲ್ಲಿ ನಡೆದ ಪ್ರಸಂಗವು ಬಿಬಿಎಂಪಿ ಆಯುಕ್ತರ ಜತೆಗೆ ಸರ್ಕಾರಕ್ಕೂ ಮುಜುಗರ ತಂದೊಡ್ಡಿತು. ತಮ್ಮದೇ ಆದ ಯೋಚನೆ, ನಿರ್ಧಾರಗಳಲ್ಲಿ ಮುಳುಗಿದ್ದ ಆಯುಕ್ತರು ಕೆಲ ಸಂದರ್ಭ ಸಚಿವ, ಶಾಸಕರ ಮಾತು ಕೇಳದ ರೀತಿ ವರ್ತಿಸುತ್ತಿದ್ದರೆಂಬ ದೂರುಗಳಿವೆ.
ಇಕ್ಕಟ್ಟಿನಿಂದ ಪಾರು: ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ತೆರೆದ ಕರೊನಾ ಆರೈಕೆ ಕೇಂದ್ರಕ್ಕೆ 10,100 ಹಾಸಿಗೆಗಳನ್ನು ಬಾಡಿಗೆ ಪಡೆಯುವ ಅನಿಲ್ಕುಮಾರ್ ಪ್ಲಾ್ಯನ್ ಜಾರಿಯಾಗಿದ್ದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿತ್ತು. ಬಿಎಸ್ವೈ ಔಚಿತ್ಯ ಪ್ರಜ್ಞೆ ಮೆರೆದಿದ್ದರಿಂದ ಕೋಟ್ಯಂತರ ರೂ. ಭ್ರಷ್ಟಾಚಾರ, ಹಣದ ಅಪವ್ಯಯ ತಪ್ಪಿತು. ಬಾಡಿಗೆ ಬದಲಿಗೆ ಖರೀದಿ, ನಂತರ ಇವುಗಳನ್ನು ಹಾಸ್ಟೆಲ್ಗೆ
ಒದಗಿಸಲು ಆದೇಶಿಸಿ ತಮ್ಮ ಕೈಗೆ ಆರೋಪದ ಅಸ್ತ್ರ ಸಿಗದಂತೆ ನೋಡಿಕೊಂಡಿದ್ದು ವಿಪಕ್ಷ ನಾಯಕರಿಗೆ ನಿರಾಸೆ ತಂದಿತ್ತು. ಪ್ರತ್ಯೇಕ, ಟಾಸ್ಕ್ಫೋರ್ಸ್ ಸಭೆಗಳಲ್ಲಿ ಲೋಪದೋಷ ಸರಿಪಡಿಸಿಕೊಳ್ಳಲು ಬಿಬಿಎಂಪಿ ಆಯುಕ್ತರಿಗೆ ಸಿಎಂ ಖಡಕ್ ಸೂಚನೆ ನೀಡಿದ್ದರು. ಭ್ರಷ್ಟಾಚಾರದ ವಾಸನೆ, ವೈಫಲ್ಯಗಳ ಸರಣಿ, ಹೈಕೋರ್ಟ್ನ ಘಟನೆಯು ಆಯುಕ್ತರ ಹಠಾತ್ ವರ್ಗಾವಣೆಗೆ ಕಾರಣವಾಗಿದ್ದು, ಕರ್ತವ್ಯ ಹಾಗೂ ಜವಾಬ್ದಾರಿ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಕಾರ್ಯತತ್ಪರತೆಯೇ ಸಿಎಂ ಹೆಬ್ಬಯಕೆ ಎನ್ನುವುದಕ್ಕೆ ಈ ಬೆಳವಣಿಗೆ ನಿದರ್ಶನವಾಗಿದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ, ಲಾಕ್ಡೌನ್ ವೇಳೆ ಇಂದಿರಾ ಕ್ಯಾಂಟೀನ್ಗಳಲ್ಲಿ ಉಪಾಹಾರ, ಊಟ ವಿತರಣೆಯಲ್ಲಿ ಭ್ರಷ್ಟಾಚಾರ, ಪರಿಸ್ಥಿತಿಯ ಲಾಭದ ಸುಳಿವು ಅರಿತ ಸಿಎಂ, ಉಚಿತದ ಬದಲಿಗೆ ಸಾಂಕೇತಿಕ ದರ ನಿಗದಿಪಡಿಸಿ, ಪ್ರತಿಪಕ್ಷಗಳ ಆರೋಪ, ಟೀಕೆಗಳಿಗೆ ಆಹಾರವಾಗುವುದನ್ನು ತಪ್ಪಿಸಿದ್ದರು.
ಹಿರಿಯ ಸಚಿವರಿಗೆ ಸಂಕಟ: ಹಲವು ಪ್ರಮುಖ ಸಚಿವರು ಸಂಪುಟ ಸಭೆಯಲ್ಲಿ ಭಾಗಿಯಾಗುವುದು ಬಿಟ್ಟರೆ ಯಾವ ಕೆಲಸವನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಅಸಮಾಧಾನಗೊಂಡಿದ್ದ ಸಿಎಂ, ಅನಿಲ್ಕುಮಾರ್ ಎತ್ತಂಗಡಿ ಮೂಲಕ ಸೋಮಾರಿ ಸಚಿವರಿಗೂ ಎಚ್ಚರಿಕೆ ರವಾನಿಸಿದ್ದಾರೆಂದೇ ಬಿಜೆಪಿ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಇಬ್ಬರು ಮೂವರು ಸಚಿವರು ಮಾತ್ರವೇ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆಂಬುದು ಪಕ್ಷದ ವರಿಷ್ಠರ ಗಮನಕ್ಕೂ ಬಂದಿದೆ ಎನ್ನಲಾಗಿದೆ.
ವರಿಷ್ಠರಿಗೆ ವಸ್ತುಸ್ಥಿತಿ ವಿವರಣೆ: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರೊನಾ ಸೋಂಕು ಹೆಚ್ಚಿರುವುದು ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದು, ರಾಜ್ಯ ಸರ್ಕಾರದ ಕಡೆಯಿಂದ ಮಾಹಿತಿ ಪಡೆದು ಧೈರ್ಯ ತುಂಬಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಡಾ.ಹರ್ಷವರ್ಧನ್ ಶನಿವಾರ ತಡರಾತ್ರಿ ಯಡಿಯೂರಪ್ಪರನ್ನು ಸಂರ್ಪಸಿದ್ದು, ರಾಜ್ಯದ ವಸ್ತುಸ್ಥಿತಿ ವಿವರ ಪಡೆದಿದ್ದಾರೆ. ಕರೊನಾ ಕಟ್ಟಿಹಾಕಲು ಅಗತ್ಯ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಿರಿ, ಕೇಂದ್ರ ಸರ್ಕಾರ ಮತ್ತು ಪಕ್ಷದ ಕೇಂದ್ರ ನಾಯಕತ್ವ ನಿಮ್ಮ ಬೆಂಬಲಕ್ಕಿರಲಿದೆ ಎಂಬ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಕರೊನಾ ಉಲ್ಬಣಿಸಲು ಕಾರಣಗಳನ್ನು ತಿಳಿಸಿ, ತಡೆಗಟ್ಟಲು ಕೈಗೊಂಡಿರುವ ಕ್ರಮಗಳಿಗೆ ಬೆಂಗಳೂರು ಮಾದರಿಯಾಗಿದ್ದು, ಅದೇ ಉತ್ಸಾಹ ಮುಂದುವರಿಸಿ ಮಾದರಿಯಾಗಿರುವಂತೆ ನೋಡಿಕೊಳ್ಳಲಿದೆ ಎಂದು ಸಿಎಂ ದೃಢ ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಎಲ್ಲ ಸಚಿವರೊಂದಿಗೆ ಸಮನ್ವಯತೆ ಸಾಧಿಸಿ ಪ್ರತಿಯೊಬ್ಬರಿಗೆ ಜವಾಬ್ದಾರಿ ಒಪ್ಪಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುವುದಕ್ಕೆ ನೆರೆ ರಾಜ್ಯಗಳ ವಲಸಿಗರ ವಾಪಸಾತಿಯು ಮುಖ್ಯ ಕಾರಣ. ಜಿಲ್ಲಾ ಆಡಳಿತಗಳು ಅಗತ್ಯ ಸೂಚನೆ ನೀಡಲಾಗಿದೆ. ಬಹುತೇಕ ಜಿಲ್ಲಾಧಿಕಾರಿಗಳು ಲಾಕ್ಡೌನ್ ಬೇಡ, ನಿಯಂತ್ರಣಕ್ಕೆ ಸಮರ್ಥವೆಂಬ ಇಚ್ಛಾಶಕ್ತಿ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲೂ ಬಿಗಿ ಕ್ರಮಗಳನ್ನು ಸೂಚಿಸಿರುವೆ. ಚಿಕಿತ್ಸೆ, ಆಂಬುಲೆನ್ಸ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿದ್ದು, ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಕಾಲೇಜುಗಳು ಕೈಜೋಡಿಸಿವೆ ಎಂಬ ವಿವರವನ್ನು ಸಿಎಂ ನೀಡಿದರು ಎಂದು ಮೂಲಗಳು ಹೇಳಿವೆ.